ತುರುವೇಕೆರೆ: ಅಲ್ಪಸಂಖ್ಯಾತರ ಅಭಿವೃದ್ದಿ ಯೋಜನೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶೇಷ ಯೋಜನೆಯಡಿ ತುರುವೇಕೆರೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ಒಂದು ಕೋಟಿ ವೆಚ್ಚದ ಸಿಸಿ ರಸ್ತೆ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಅಡಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ತಾಲೂಕಿನ ಆರ್.ಎಸ್.ಪಾಳ್ಯ, ಹಟ್ಟಿಹಳ್ಳಿ, ಬೀಚನಹಳ್ಳಿ ಯಲ್ಲಿ ತಲಾ 20 ಲಕ್ಷ ವೆಚ್ಚದಲ್ಲಿ ಹಾಗೂ ತುರುವೇಕೆರೆ ಪಟ್ಟಣದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ದರ್ಗಾಕ್ಕೆ ಸಂಪರ್ಕಿಸುವ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶೇಷ ಯೋಜನೆಯಡಿ ಹಟ್ಟಿಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ಮನೆಮನೆಗೆ ಗಂಗೆ, ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿದ್ದು ಹಂತ ಹಂತವಾಗಿ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಅನುದಾನವನ್ನು ತಂದಿರುತ್ತೇವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು, ಕಾಮಗಾರಿ ಕಳಪೆಯಾದರೆ ಯಾವುದೇ ಕಾರಣಕ್ಕೂ ಬಿಲ್ ಆಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ಮನೆಮನೆಗೆ ಗಂಗೆ, ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಯಾವ ನಿಯಮಗಳಿದೆಯೋ ಅದನ್ನು ಕಡ್ಡಾಯವಾಗಿ ಅನುಸರಿಸಬೇಕು, ಕೊಳಾಯಿ ಹಾಕುವ ಭರದಲ್ಲಿ ರಸ್ತೆಯನ್ನು ಹದೆಗೆಡಿಸುವ ಕೆಲಸವಾಗಬಾರದು. ಮನೆಮನೆಗೆ ಕೊಳಾಯಿ ಅಳವಡಿಸಲು ಪೈಪ್ ಲೈನ್ ಗೆ ರಸ್ತೆ ಅಗೆದು ಪೈಪ್ ಲೈನ್ ಪೂರ್ಣ ಅಳವಡಿಸಿದ ನಂತರ ರಸ್ತೆ ಸರಿಪಡಿಸಬೇಕು, ಹಾಗೆಯೇ ಬಿಟ್ಟು ರಸ್ತೆ ಹಾಳುಗೆಡವುದು ಸರಿಯಲ್ಲ. ಈ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಗುತ್ತಿಗೆದಾರರಾದ ವಿಠಲದೇವರಹಳ್ಳಿ ಹರೀಶ್, ಶ್ರೀಶೈಲ, ರಾಜಕುಮಾರ್, ತ್ಯಾಗರಾಜ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರವಿಕುಮಾರ್, ಗ್ರಾಪಂ ಸದಸ್ಯ ಗೌರೀಶ್, ವಿಠಲದೇವರಹಳ್ಳಿ ಮಂಜಣ್ಣ, ಗೋವಿಂದರಾಜು, ಜಗದೀಶ್, ಮುತ್ತುರಾಜ್, ಶಂಕರಪ್ಪ, ಹಟ್ಟಿಹಳ್ಳಿಯ ಶಿವಕುಮಾರ್, ಜಯಣ್ಣ, ತಿಮ್ಮೇಗೌಡ, ದಿನೇಶ್, ಕಾಂತರಾಜು, ನಾಗರಾಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್