ಬೆಂಗಳೂರು : ಉತ್ತರ ಕನ್ನಡ ಅಂಕೋಲದ ಬೇಲೇಕೇರಿ ಬಂದರಿನಿಂದ 2010ರ ಅವಧಿಯಲ್ಲಿ ನಡೆದಿದ್ದ ಅದಿರು ನಾಪತ್ತೆ ಹಗರಣ ಸಂಬಂಧ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್ ಅವರು, ಅರಣ್ಯ ಅಧಿಕಾರಿ ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ಮೊನ್ನೆಯಷ್ಟೇ ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಹಗರಣದಲ್ಲಿ ಸಂಬಂಧ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿದ್ದನ್ನು ಮುಟ್ಟುಗೋಲು ಹಾಕಲಾಗಿತ್ತು. ಅದಿರು ನಾಪತ್ತೆ ವಿರುದ್ಧ ದಾಖಲಾದ 6 ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸಿದ್ದ ಸಿಬಿಐ, ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಪ್ರಕರಣದ ಎಲ್ಲಾ ಅಪರಾಧಿಗಳಿಗೆ ಒಟ್ಟು 5 ವರ್ಷಗಳ ಶಿಕ್ಷೆಯಾಗಿದೆ. ಈ ಶಿಕ್ಷೆಯ ಪ್ರಮಾಣದ ತೀರ್ಪು ಮೊದಲ ಪ್ರಕರಣದಲ್ಲಿ ನೀಡಲಾಗಿದೆ.