ಚೇಳೂರು: ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಬುಧವಾರ ಚೇಳೂರು ತಾಲೂಕಿನಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಹಾಗೂ ಸೌಹಾರ್ದತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕಾರ: ಮೊದಲಿಗೆ ಸಂಜೆ ಚೇಳೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿದ್ದ ಶಾಸಕರು, ನೂರಾರು ಜನರ ಅಹವಾಲುಗಳನ್ನು ಆಲಿಸಿದರು.
ಪೌತಿ ಖಾತೆ, ಪಹಣಿ ತಿದ್ದುಪಡಿ ಹಾಗೂ ವಿವಿಧ ಪಿಂಚಣಿ ಯೋಜನೆಗಳ ಕುರಿತ ಮನವಿಗಳನ್ನು ಸ್ವೀಕರಿಸಿದ ಅವರು, ಸ್ಥಳದಲ್ಲಿದ್ದ ತಹಶೀಲ್ದಾರ್ ಶ್ವೇತ ಬಿ.ಕೆ. ಹಾಗೂ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೈರಪ್ಪನಹಳ್ಳಿ ರಸ್ತೆ ಕಾಮಗಾರಿ ಪರಿಶೀಲನೆ: ನಂತರ ಆಂಧ್ರದ ಗಡಿಭಾಗದಲ್ಲಿರುವ ಬೈರಪ್ಪನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು.
ದಶಕಗಳಿಂದ ಮಣ್ಣಿನ ರಸ್ತೆಯಾಗಿದ್ದ ಕಂದುಕೂರು ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಹಾದಿಗೆ ಇದೀಗ ಡಾಂಬರೀಕರಣ ಮಾಡಲಾಗುತ್ತಿದ್ದು, ಕಾಮಗಾರಿಯ ಗುಣಮಟ್ಟವನ್ನು ಶಾಸಕರು ಖುದ್ದು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಇಫ್ತಿಯಾರ್ ಕೂಟದಲ್ಲಿ ಭಾಗಿ: ಸಂಜೆ ಪಟ್ಟಣದ ಜಾಮಿಯಾ ಮಸೀದಿ ಹಾಗೂ ಮದೀನಾ ಮಸೀದಿಗಳಲ್ಲಿ ಶಾಸಕರು ಏರ್ಪಡಿಸಿದ್ದ ಇಫ್ತಿಯಾರ್ ಭೋಜನ ಕೂಟದಲ್ಲಿ ಅವರು ಭಾಗವಹಿಸಿದರು. ಶಾಸಕರು ಮಸೀದಿಗೆ ಆಗಮಿಸಿದಾಗ ಮುಸ್ಲಿಂ ಬಾಂಧವರು ಪಟಾಕಿ ಸಿಡಿಸಿ, ಪುಟ್ಟ ಮಕ್ಕಳು ಹೂವುಗಳನ್ನು ಅರ್ಪಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ, ಈ ಸೌಹಾರ್ದತೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ವೇತ ಬಿ.ಕೆ., ಆರ್.ಐ. ಈಶ್ವರ್, ವಿ.ಎ. ಅಭಿಷೇಕ್, ಕಾಂಗ್ರೆಸ್ ಮುಖಂಡರಾದ ಪಿ.ಆರ್. ಚಲಂ, ಸಾಹುಕಾರ ಶ್ರೀನಿವಾಸ್, ಸುರೇಂದ್ರ, ಜೆ.ಎನ್. ಜಾಲಾರಿ, ರಾಮೋಜಿಪಲ್ಲಿ ಶ್ರೀನಿವಾಸ್,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಬಿವಿ ಮಂಜುನಾಥ,ಮೆಕ್ಯಾನಿಕ್ ನಯಾಜ್, ಪಾಳ್ಯಕೆರೆ ರಾಹುಲ್, ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಗಣ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ :ಯಾರಬ್. ಎಂ.




