—————————-ಹಾನಗಲ್: ಪುರಸಭೆ ವ್ಯಾಪ್ತಿಯ ವಸತಿ ರಹಿತ ಫಲಾನುಭವಿಗಳಿಗೆ ವಿತರಣೆ
ಹಾನಗಲ್: ನಗರ ಬೆಳೆಯುತ್ತಿದೆ. ಇಲ್ಲಿನ 400ರಿಂದ 500 ಕುಟುಂಬಗಳು ನಿವೇಶನ ಇಲ್ಲದೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಅಂಥ ಕುಟುಂಬಗಳಿಗೆ ತಮ್ಮ ಅವಧಿ ಮುಗಿಯುವ ಒಳಗೆ ನಿವೇಶನ ದೊರಕಿಸುವ ಸಂಕಲ್ಪ ಮಾಡಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಮೌಲಾನಾ ಆಜಾದ್ ಶಾಲೆಯಲ್ಲಿ ಪುರಸಭೆಯ ಆಶ್ರಯದಲ್ಲಿ ನಡೆದ ಮುಖ್ಯಮಂತ್ರಿಗಳ ವಸತಿ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯ 53 ವಸತಿ ರಹಿತ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ವಸತಿ ರಹಿತರಿಗೆ ನಿವೇಶನ ದೊರಕಿಸುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಲಿರುವ ಹೊಸ ರೀತಿಯ ಪ್ರಯೋಗ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಸ್ಲಂ ಬೋರ್ಡ್ನಿಂದ ಒಂದು ಸಾವಿರ, ಆಶ್ರಯ ಯೋಜನೆಯಡಿ ಇನ್ನೊಂದು ಸಾವಿರ ಮನೆಗಳನ್ನು ಮಂಜೂರಿ ಮಾಡಿಸಲಾಗಿದ್ದು, ಅರ್ಜಿಗಳಿಲ್ಲದ ಕಾರಣ ಆಶ್ರಯ ಯೋಜನೆಯಡಿಯ 5೦೦ ಮನೆಗಳನ್ನು ವಾಪಸ್ ನೀಡಲಾಗಿದೆ. ಈ ಪೈಕಿ 36೦ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಇನ್ನೂ 14೦ ಮನೆಗಳು ಬಾಕಿ ಇವೆ. ಅರ್ಹರು ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಆಶ್ರಯ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಸಹಾಯಧನದಲ್ಲಿ ತನ್ನ ಪಾಲಿನ ಅರ್ಧ ಹಣವನ್ನು ರಾಜ್ಯ ಸರ್ಕಾರ ನೀಡಿದ್ದು, ಉಳಿದರ್ಧ ಹಣವನ್ನು ಕೇಂದ್ರ ಸರ್ಕಾರ ಪಾವತಿಸಬೇಕಿದೆ, ನವನಗರ ಪ್ರದೇಶವನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ತರುವ ಮೂಲಕ ಮನೆ ಮಾಲಿಕತ್ವದ ಹಕ್ಕುಪತ್ರ ಕೊಡಿಸಲು ಕಾಳಜಿ ವಹಿಸಲಾಗಿದೆ ಎಂದರು.
ವರದಿ: ರಮೇಶ್ ತಾಳಿಕೋಟಿ




