ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿಯೂ ಬಾಣಂತಿಯರ ಹಾಗೂ ಶಿಶುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಂಗಳೂರು ಬಿಟ್ಟು ಕೆಲವು ಮಂತ್ರಿಗಳು ಬೇರೆಡೆಗೆ ಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಮುಡಾ ಭ್ರಷ್ಟಾಚಾರದಲ್ಲಿ ಸಿಲುಕಿ ಆಡಳಿತ ಯಂತ್ರ ಕುಸಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್, ಮೋದಿ, ಬಿಜೆಪಿಗೆ ಬೈಯ್ಯುವುದಕ್ಕಿಂತ ಮೊದಲು ಆಡಳಿತ ಸುಧಾರಣೆ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಲೂಟಿ ಮಾಡುತ್ತಾ ಕುಳಿತರೆ ಅಧಿಕಾರಿಗಳಿಗೆ ಭಯ ಇರುವುದಿಲ್ಲ. ಹೈಕಮಾಂಡ್ ಗೆ ದುಡ್ಡು ಕೊಡುವುದು, ಖುಷಿಪಡಿಸುವುದರಲ್ಲಿಯೇ ಕೆಲವರು ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಯಾರು ಸಿಎಂ ಆಗ್ತರೆ ಗೊತ್ತಿಲ್ಲ, ಇದ್ದಾಗ ಸರಿಯಾಗಿ ಕೆಲಸ ಮಾಡಿ ಎಂದು ಹೇಳಿದರು.
ಸಿಎಂ ಆಗಿ ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅಧಿವೇಶನ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ವಿಜಯೇಂದ್ರ ಬಳಿ ಇರುವ ಇಂಟಲಿಜನ್ಸ್ ನನ್ನ ಬಳಿ ಇಲ್ಲ. ಸಿಎಂ ಸ್ಥಾನದಿಂದ ಇಳಿದೇ ಬಿಡ್ತಾರೆ ಎಂದು ನಾನು ಹೇಳುವುದಿಲ್ಲ. ಇಡಿ ದಾಳಿ ಏನಾದರೂ ಆದರೆ ಕೊನೆ ಅಧಿವೇಶನವಾಗಬಹುದು ಎಂದು ಹೇಳಿದರು.