ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಮ್ಮ ಬಣದಿಂದ ಒಬ್ಬರು ಅಭ್ಯರ್ಥಿ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಕಲುಷಿತರನ್ನು ದೂರವಿಡಲು ತಾವು ಸ್ಪರ್ಧಿಸಬಯಸುವುದಾಗಿ ಹೇಳಿದ್ದಾರೆ.
ನಿನ್ನೆಯಷ್ಟೇ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಕೆಲವು ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಬಸನಗೌಡ ಪಾಟೀಲ್ ಯತ್ನಾಳ್ ಬಣದ ವಿರುದ್ದ ಕಿಡಿ ಕಾರಿದ್ದರು. ಜೊತೆಗೆ, ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರೆಯುತ್ತಿರುವುದಾಗಿ ಸಮರ್ಥಿಸಿಕೊಂಡಿದ್ದರು. ಈ ಬೆನ್ನಲ್ಲೇ ಯತ್ನಾಳ್ ಹೇಳಿಕೆ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ್ದು, ಈಗ ಮುಂಬರುವ ರಾಜ್ಯಾಧ್ಯಕ್ಷ ಚುನಾವಣೆಯತ್ತ ಎಲ್ಲರ ಗಮನ ಸೆಳೆದಿದೆ.
ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದಾಗಿನಿಂದಲೂ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ದ ಕಿಡಿ ಕಾರುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವ ಬದಲಾವಣೆ ಬಗ್ಗೆ ಹಲವು ಬಾರಿ ಹೇಳಿಕೆ ನೀಡಿದ್ದರು. ಅಪ್ಪ ಮತ್ತು ಮಗ (ಯಡಿಯೂರಪ್ಪ ಮತ್ತು ವಿಜಯೇಂದ್ರ) ಅವರಿಂದಲೇ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಬಿಜೆಪಿ ಸೋಲಬೇಕಾಯಿತು ಎಂದು ಆರೋಪಿಸಿರುವ ಯತ್ನಾಳ್, ಯಾವುದೇ ಮನವೊಲಿಕೆಗೂ ಬಗ್ಗಿಲ್ಲ. ಪ್ರತ್ಯೇಕವಾಗಿ ತಂಡ ರಚಿಸಿ ಸಭೆಗಳನ್ನು ನಡೆಸುತ್ತಿರುವ ಯತ್ನಾಳ್ ಅವರ ಚಟುವಟಿಕೆ ಬಿಜೆಪಿ ರಾಜ್ಯ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.