ಬೆಳಗಾವಿ: ಮಕ್ಕಳನ್ನು ಮೊಬೈಲ್ ಫೋನ್ ಗೀಳಿನಿಂದ ಹೊರತಂದು ಓದಿನತ್ತ ಸೆಳೆಯಲು ಮತ್ತು ಮನೆಗಳಲ್ಲಿ ಕೌಟುಂಬಿಕ ಸಂವಹನ ವೃದ್ಧಿಸಲು ತಾಲ್ಲೂಕಿನ ಹಲಗಾ ಗ್ರಾಮಸ್ಥರು ನಿತ್ಯ ಸಂಜೆ 7 ರಿಂದ ರಾತ್ರಿ 9ರವರೆಗೆ (ತುರ್ತು ಸಂದರ್ಭ ಹೊರತುಪಡಿಸಿ) ತಮ್ಮ ಮನೆಗಳಲ್ಲಿ ಮೊಬೈಲ್ ಫೋನ್ ಮತ್ತು ಟಿವಿ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಸುವರ್ಣ ವಿಧಾನಸೌಧದ ಬಳಿಯಿರುವ ಹಲಗಾ ಗ್ರಾಮದಲ್ಲಿ 1,452 ಮನೆಗಳಿವೆ. ಗ್ರಾಮದ ಬಹುತೇಕರ ಮನೆಗಳಲ್ಲಿ ಮಕ್ಕಳು ಮೊಬೈಲ್ ಫೋನ್ ಬಳಸುವುದು ಮತ್ತು ಮನೆಗಳಲ್ಲಿ ಕುಟುಂಬದವರು ಹೆಚ್ಚಾಗಿ ಟಿವಿ ವೀಕ್ಷಿಸುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೇ ಸಮಸ್ಯೆಯನ್ನು ನಿವಾರಿಸಲು ಅಲ್ಲಿನ ಗ್ರಾಮಸ್ಥರು ನಿತ್ಯ ಸಂಜೆ ಎರಡು ಗಂಟೆ ಮೊಬೈಲ್, ಟಿವಿ ಬಳಕೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದರು. ಇದು ಹಲಗಾ ಗ್ರಾಮಸ್ಥರಿಗೆ ಪ್ರೇರಣೆಯಾಗಿದೆ.




