ಅದಾನಿ ದೋಷಾರೋಪಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂಡಿಯಾ ಬ್ಲಾಕ್ ಪಕ್ಷಗಳ ಮುಖಂಡರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು ಅದಾನಿ ಬಂಧನಕ್ಕೆ ಒತ್ತಾಯಿಸಿದರು.
ಈ ಹಿಂದೆ ರಾಹುಲ್ ಗಾಂಧಿಯವರು, ಪ್ರಧಾನಿ ಮೋದಿಯವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಸಂಸತ್ ಆವರಣದಲ್ಲಿ ಮೋದಿ ಅದಾನಿ ಏಕ್ ಹೈ, ಅದಾನಿ ಸೇಫ್ ಹೈ ಎಂಬ ಜಾಕೆಟ್ ಅನ್ನು ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಲಂಚ, ವಂಚನೆ ಆರೋಪದ ಮೇಲೆ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕಂಪನಿಯ ಇತರ ಅಧಿಕಾರಿಗಳ ವಿರುದ್ದ ಯುಎಸ್ ಪ್ರಾಸಿಕ್ಯೂಟರ್‌ಗಳು ದೋಷಾರೋಪಣೆ ಮಾಡಿರುವ ಹಿನ್ನೆಲೆ, ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಈ ಪ್ರಕರಣದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿವೆ
ಯುಎಸ್ ನ್ಯಾಯಾಲಯದಲ್ಲಿ ಅದಾನಿ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು ಬಿಲಿಯನೇರ್ ಕೈಗಾರಿಕೋದ್ಯಮಿಗಳ ಸಮೂಹವನ್ನು ಒಳಗೊಂಡಿರುವ ವಿವಿಧ ‘ವಂಚನೆಗಳ’ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ
ಅಲ್ಲದೇ ಪ್ರಧಾನಿ ಮೋದಿ ರಕ್ಷಣೆಯಲ್ಲಿರುವ ಅದಾನಿಯನ್ನು ಈ ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.