ನವದೆಹಲಿ : ಗಣೇಶ ಮೆರವಣಿಗೆ ಗುರಿಯಾಗಿಸಿ ಕರ್ನಾಟಕದಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಕರ್ನಾಟಕ ಮಂಡ್ಯದ ನಾಗಮಂಗಲದ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ, ಹಿಂಸಾಚಾರವನ್ನು ಅವರು ತೀವ್ರವಾಗಿ ಖಂಡಿಸಿದರು.
ತುಷ್ಟೀಕರಣವೇ ಕಾಂಗ್ರೆಸ್‌ನ ದುರುದ್ದೇಶ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಗಣೇಶನನ್ನೂ ಬಂಧಿಸಲಾಗುತ್ತಿದೆ. ಇಡೀ ದೇಶವೇ ಗಣೇಶೋತ್ಸವವನ್ನು ಆಚರಿಸುತ್ತಿದೆ. ಆದರೆ ಕಾಂಗ್ರೆಸ್ ವಿಘ್ನನಿವಾರಕನ ಪೂಜೆಗೂ ವಿಘ್ನವನ್ನುಂಟು ಮಾಡುತ್ತಿದೆ ಎಂದು ಚಾಟಿ ಬೀಸಿದರು. ಇನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಗಣೇಶ ಮೂರ್ತಿಗೆ ಜೈಲು ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ.
ಪೊಲೀಸರು ಇತ್ತೀಚೆಗೆ ಪೊಲೀಸ್ ಬಸ್ ನಲ್ಲಿ ವಿಸರ್ಜಗೆ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದನ್ನು ಉಲ್ಲೇಖಿಸಿ ಮೋದಿ ಅವರು ಕಿಡಿಕಾರಿದರು. ವಿಪಕ್ಷಗಳು ಕೇವಲ ತಮ್ಮ ಪರಿವಾರ, ಕುಟುಂಬಸ್ಥರ ಬಗ್ಗೆ ಯೋಚಿಸುತ್ತಾ ಕುಟುಂಬ ರಾಜಕಾರಣ ಮಾಡಿದ್ದಾರೆ. ಜಮ್ಮು-ಕಾಶ್ಮೀರ ಜನರನ್ನು ಮರಳು ಮಾಡಿದ್ದಾರೆ ಎಂದು ಟೀಕಿಸಿದರು.