ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಲ್ಯದಿಂದಲೇ ಸ್ವಚ್ಛತೆಯ ಅಭ್ಯಾಸ ಹೊಂದಿದ್ದೇನೆ ಎಂದು ತಿಳಿಸಿದರು. ಲೆಕ್ಸ್ ಫ್ರಿಡ್‌ಮನ್ ಜೊತೆಗಿನ ಸಂಭಾಷಣೆಯಲ್ಲಿ ಶಾಲಾ ದಿನಗಳಲ್ಲಿ ಧರಿಸುತ್ತಿದ್ದ ಬಿಳಿ ಕ್ಯಾನ್ವಾಸ್ ಶೂಗಳನ್ನು ಬಿಳಿಯಾಗಿಟ್ಟುಕೊಳ್ಳಲು ಮಾಡುತ್ತಿದ್ದ ಸರ್ಕಸ್ ಬಗ್ಗೆ ಮಾತನಾಡಿದ್ದಾರೆ.
ಶಾಲೆಗೆ ಹೋಗುವಾಗ ಚಿಕ್ಕಪ್ಪ ಭೇಟಿಯಾಗಿ, ಶೂಗಳಿಲ್ಲದೇ ಇರುವುದನ್ನು ಗಮನಿಸಿ ಕ್ಯಾನ್ವಾಸ್ ಶೂಗಳನ್ನು ಖರೀದಿಸಿದರು. ಆ ಬಿಳಿ ಶೂಗಳು ಬೇಗ ಕೊಳೆಯಾಗುತ್ತಿದ್ದವು ಎಂದು ಮೋದಿ ನೆನಪಿಸಿಕೊಂಡರು.
ಅಲ್ಲದೆ ಶೂಗಳನ್ನು ಸ್ವಚ್ಛವಾಗಿಡಲು, ಶಾಲೆಯ ನಂತರ ಚಾಕ್ ತುಂಡುಗಳನ್ನು ಸಂಗ್ರಹಿಸಿ, ಅದನ್ನು ಶೂಗಳಗೆ ಹಚ್ಚಿ ಹೊಳಪು ಬರುವಂತೆ ಮಾಡುತಿದ್ದೆ ಎಂದರು. ಆ ಶೂಗಳು ಅಮೂಲ್ಯವಾಗಿದ್ದವು ಮತ್ತು ತಾಯಿಯ ಶುಚಿತ್ವದ ಕಟ್ಟುನಿಟ್ಟಿನಿಂದ ಈ ಅಭ್ಯಾಸ ಬಂದಿರಬಹುದು ಎಂದು ತಿಳಿಸಿದರು.
ಇನ್ನು ಉಪವಾಸದ ಕುರಿತು ಮಾತನಾಡಿದ ಮೋದಿ, ಕೆಲವೊಮ್ಮೆ ನಾನು ಉಪವಾಸವನ್ನು ಶಿಸ್ತನ್ನು ಬೆಳೆಸುವ ಒಂದು ಮಾರ್ಗವಾಗಿ ನೋಡುತ್ತೇನೆ ಎಂದು ಹೇಳಿದರು.
ಮೋದಿ ತಮ್ಮ ಕಠಿಣ ಉಪವಾಸ ವಿಧಾನದ ಬಗ್ಗೆಯೂ ಮಾತನಾಡಿದ್ದಾರೆ. ಉಪವಾಸವು ನನ್ನನ್ನು ಎಂದಿಗೂ ನಿಧಾನಗೊಳಿಸುವುದಿಲ್ಲ. ಕೆಲವೊಮ್ಮೆ ನಾನು ಹೆಚ್ಚು ಕೆಲಸ ಮಾಡುತ್ತೇನೆ, ಎಂದು ಪ್ರಧಾನಿ ಹೇಳಿದರು.
ವಿಶೇಷವಾಗಿ ಚಾತುರ್ಮಾಸದ ಸಮಯದಲ್ಲಿ ಅವರು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ದಿನಕ್ಕೆ ಒಂದೇ ಬಾರಿ ಆಹಾರ ಸೇವಿಸುತ್ತಾರೆ. ಇನ್ನು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಕೇವಲ ಬಿಸಿ ನೀರು ಅಥವಾ ಒಂದು ಹಣ್ಣನ್ನು ಮಾತ್ರ ಸೇವಿಸುತ್ತಾರೆ. ಇದೆಲ್ಲದರ ನಡುವೆಯೂ ತಮ್ಮ ಜವಾಬ್ದಾರಿಗಳನ್ನು ಯಾವುದೇ ಅಡಚಣೆಯಿಲ್ಲದೆ ನಿರ್ವಹಿಸುತ್ತಿರುವುದಾಗಿ ಮೋದಿ ಹೇಳಿದ್ದಾರೆ.