ಕಲಾಂ ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿ
ಭಾಲ್ಕಿ: ಡಾ.ಅಬ್ದುಲ್ ಕಲಾಂ ಅವರು ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿ ಆಗಿದ್ದರು ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಆಡಳಿತಾಧಿಕಾರಿ ಮೋಹನರೆಡ್ಡಿ ಬಣ್ಣಿಸಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವದಲ್ಲಿಯೇ ದೇಶದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹೆಚ್ಚಿಸಿದ ಶ್ರೇಷ್ಠ ವಿಜ್ಞಾನಿ, ಮಾದರಿ ರಾಷ್ಟ್ರಪತಿ, ಅತ್ಯುತ್ತಮ ಮಾನವ ಕಲಾಂ ಆಗಿದ್ದರು. ಮಕ್ಕಳ ಒಡನಾಡಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಇವರು ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದರು ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಮ್ಮ ರಾಷ್ಟ್ರವನ್ನು ಬಲಿಷ್ಠ ರಾಷ್ಟ್ರಗಳ ಜತೆ ಪೈಪೋಟಿ ನೀಡುವಷ್ಟ್ರರ ಮಟ್ಟಿಗೆ ಬೆಳೆಸಿದ ಕೀರ್ತಿ ಕಲಾಂರದು. ಇಂದಿನ ಯುವ ಪೀಳಿಗೆ ಅವರ ಆದರ್ಶ ಮತ್ತು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ದೇಶ ರಕ್ಷ ಣೆಯಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಹಿರೇಮಠ ಸಂಸ್ಥಾನ ವಿದ್ಯಾಪೀಠದ ಸಂಯೋಜಕ ಬಾಲಾಜಿ ವಲ್ಲೂರೆ, ಲಚಮಾರೆಡ್ಡಿ, ರವಿ ಬಿರಾದರ, ಜೆಇಇ ಸಂಯೋಜಕ ನಾಗೇಶ ಬಿರಾದರ, ಹಣಮಂತ ಜ್ಯಾಂತಿಕರ್ ಸೇರಿದಂತೆ ಇತರರು ಇದ್ದರು.
ವರದಿ : ಸಂತೋಷ ಬಿಜಿ ಪಾಟೀಲ