ಮೋಹಿತ್ ನಿಜವಾನ್ ಗೆ ಈಗ ವಾರ್ಷಿಕ 1.44 ಕೋಟಿ ಆದಾಯ
ಚಂಡೀಗಢ: ಆಹಾರದಲ್ಲಿ ಮೈಕ್ರೋಗ್ರೀನ್ ಬಳಸಿ ಅಡುಗೆ ಮಾಡುವ ಟ್ರೆಂಡ್ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಮೈಕ್ರೋಗ್ರೀನ್ ಹಾಕಿ ಮಾಡಿದ ಆಹಾರ ಅತ್ಯಂತ ಪೌಷ್ಟಿಕವಾಗಿರುತ್ತದೆ. ಈವರೆಗೆ ಮನೆಯ ತಾರಸಿನಲ್ಲಿ, ಹಿತ್ತಲಲ್ಲಿ ಸೊಪ್ಪು, ತರಕಾರಿ ಬೆಳೆಯುತ್ತಿದ್ದ ಜನರು ಇದೀಗ ಆಹಾರದಲ್ಲಿ ಪೌಷ್ಟಿಕಾಂಶ ಹಾಗೂ ಸತ್ವಯುತವಾದ ‘ಮೈಕ್ರೋಗ್ರೀನ್’ ಬೆಳೆಯುವತ್ತ ಒಲವು ತೋರುತ್ತಿದ್ದಾರೆ. ಅದರಂತೆ ಚಂಡೀಗಢದ ಮೋಹಿತ್ ನಿಜವಾನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿಯೇ ಮೈಕ್ರೋಗ್ರೀನ್ಸ್ ಕೃಷಿ ಮಾಡುತ್ತಾ ಬಂಪರ್ ಆದಾಯ ಗಳಿಸುತ್ತಿದ್ದಾರೆ.
ವಾರ್ಷಿಕ 1.44 ಕೋಟಿ ಆದಾಯ: ಹೌದು, ಮೋಹಿತ್ ನಿಜವಾನ್ 22 ವರ್ಷಗಳ ಕಾಲ ಔಷಧ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರು ವಾರ್ಷಿಕ 90 ಲಕ್ಷ ಪ್ಯಾಕೇಜ್ ತೆಗೆದುಕೊಳ್ಳುತ್ತಿದ್ದರು. 2020ರಲ್ಲಿ, ಕೆಲಸಕ್ಕೆ ರಾಜೀನಾಮೆ ನೀಡಿ ಮೈಕ್ರೋಗ್ರೀನ್ ಬೆಳೆಯಲು ನಿರ್ಧರಿಸಿದರು. ಅವರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಮೈಕ್ರೋಗ್ರೀನ್ ಕೃಷಿ ಮಾಡಲು ಪ್ರಾರಂಭಿಸಿದರು. ಪ್ರಸ್ತುತ ಅವರು 500 ಚದರ ಗಜಗಳಷ್ಟು ಪ್ರದೇಶದಲ್ಲಿ 70 ಕ್ಕೂ ಹೆಚ್ಚು ಜಾತಿಯ ಮೈಕ್ರೋಗ್ರೀನ್ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಇವರು ಮೈಕ್ರೋಗ್ರೀನ್ ಸಸ್ಯಗಳನ್ನು ಚಂಡೀಗಢ, ದೆಹಲಿ, ನೋಯ್ಡಾ, ಗುರುಗಾಂವ್ ಮತ್ತು ಮುಂಬೈನ ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಾರೆ. ಈ ಮೂಲಕ ಮೋಹಿತ್ ನಿಜವಾನ್ ಅವರು ವಾರ್ಷಿಕವಾಗಿ 1.44 ಕೋಟಿ ರೂ ಆದಾಯ ಗಳಿಸುತ್ತಿದ್ದಾರೆ.