ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ತೆಲಂಗಾಣ ಗಡಿಯ ಕಾಡುಗಳಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ 15ಕ್ಕೂ ಹೆಚ್ಚು ಮಾವೋವಾದಿಗಳು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಈ ಪ್ರದೇಶದಲ್ಲಿ ವಿಶಾಲ ಕಾರ್ಯಾಚರಣೆ ನಡೆಯುತ್ತಿದೆ. ಗುಂಡಿನ ಕಾಳಗವು ಇಂದು ಬೆಳಗ್ಗೆ ರಾಜ್ಯಗಳ ಗಡಿಯಲ್ಲಿರುವ ಕರ್ರೇಗುಟ್ಟ ಬೆಟ್ಟದ ಕಾಡಿನಲ್ಲಿ ಆರಂಭವಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಇದುವರೆಗೆ 15ಕ್ಕೂ ಹೆಚ್ಚು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ‘ಆಪರೇಷನ್ ಸಂಕಲ್ಪ’ವು ಬಸ್ತರ್ ಪ್ರದೇಶದಲ್ಲಿ ಆರಂಭವಾದ ಅತಿದೊಡ್ಡ ದಿಗ್ಬಂಧನ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಈ ಕಾರ್ಯಾಚರಣೆಯಲ್ಲಿ ಸುಮಾರು 24,000 ಭದ್ರತಾ ಸಿಬ್ಬಂದಿ ಭಾಗವಹಿಸಿದ್ದಾರೆ. ಇದರಲ್ಲಿ ಜಿಲ್ಲಾ ಮೀಸಲು ಗಾರ್ಡ್ (DRG), ಬಸ್ತರ್ ಫೈಟರ್ಸ್, ವಿಶೇಷ ಕಾರ್ಯಪಡೆ (STF), ರಾಜ್ಯ ಪೊಲೀಸ್‌ನ ಎಲ್ಲಾ ಘಟಕಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಕೋಬ್ರಾ ಘಟಕ ಸೇರಿವೆ.
ಈ ಕಾರ್ಯಾಚರಣೆಯನ್ನು ಏಪ್ರಿಲ್ 21 ರಂದು ಆರಂಭಿಸಲಾಗಿದ್ದು, ಮಾವೋವಾದಿಗಳ ಅತ್ಯಂತ ಶಕ್ತಿಶಾಲಿ ಸೈನಿಕ ರಚನೆಯಾದ ಬೆಟಾಲಿಯನ್ ನಂ. 1 ರ ಹಿರಿಯ ಕೇಡರ್‌ಗಳು ಮತ್ತು ತೆಲಂಗಾಣ ರಾಜ್ಯ ಮಾವೋವಾದಿ ಸಮಿತಿಯ ಸದಸ್ಯರ ಉಪಸ್ಥಿತಿಯ ಬಗ್ಗೆ ಮಾಹಿತಿ ಆಧರಿಸಿ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.