ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿ ಸುಮಾರು 25ಕ್ಕೂ ಅಧಿಕ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.
ನರೇಗಾ ಕಾರ್ಮಿಕರಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ ಈ ಅವಘಡ ಸಂಭವಿಸಿದ್ದು, ಗಾಯಾಳು ಕೂಲಿ ಕಾರ್ಮಿಕರನ್ನು ಬೀಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಯಮಕನಮರಡಿ ಗ್ರಾಮದಿಂದ ಹಿಡಕಲ್ ಡ್ಯಾಮ್‌ಗೆ ನರೇಗಾ ಕೆಲಸಕ್ಕೆಂದು ಕಾರ್ಮಿಕರು ಗೂಡ್ಸ್ ವಾಹನದಲ್ಲಿ ಹೊರಟಿದ್ದರು. ಈ ವೇಳೆ ಅಡ್ಡಬಂದ ಬುಲೆಟ್ ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದೆ.
ಘಟನೆಯಲ್ಲಿ ಹಲವು ಕಾರ್ಮಿಕರಿಗೆ ಕೈಕಾಲು ಮುರಿದಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




