ತುರುವೇಕೆರೆ: ಪಟ್ಟಣದಿಂದ ಇಂದು 500 ಕ್ಕೂ ಅಧಿಕ ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಕಟ್ಟಿಕೊಂಡು ಶಬರಿಮಲೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ತೆರಳಿದರು.
ಕಳೆದೊಂದು ತಿಂಗಳಿನಿಂದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿಯವರಿಗೆ ಪ್ರತಿನಿತ್ಯ ಜೇನುತುಪ್ಪದ ಅಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಮಾಲಾಧಾರಿಗಳು ಸ್ವಾಮಿಯ ಭಜನೆ, ಸಂಕೀರ್ತನೆಯಲ್ಲಿ ಪಾಲ್ಗೊಂಡು ವ್ರತದಲ್ಲಿ ತೊಡಗಿದ್ದರು. ಶ್ರೀ ಅಯ್ಯಪ್ಪಸ್ವಾಮಿಯವರ ಮಂಡಲ ಪೂಜೆ ಹಾಗೂ ಜ್ಯೋತಿ ಮಹೋತ್ಸವದ ಅಂಗವಾಗಿ ಅನ್ನದಾನ ಕಾರ್ಯಕ್ರಮವನ್ನು ಸಹ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ಆರತಿ ದೀಪವನ್ನು ಹೊತ್ತ ಪುಟ್ಟ ಬಾಲೆಯರು ಹಾಗೂ ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಪುಷ್ಪ ಮಂಟಪದಲ್ಲಿ ಧರ್ಮಶಾಸ್ತ್ರ ಶ್ರೀ ಅಯ್ಯಪ್ಪಸ್ವಾಮಿಯವರ ಅದ್ದೂರಿ ಮೆರವಣಿಗೆ ನೆರವೇರಿತು.
ಜನವರಿ 09 ರಂದು ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿ ರಾಮಚಂದ್ರಸ್ವಾಮಿಗಳು ಇರುಮುಡಿ ಸೇವೆ ನಡೆಸಿಕೊಟ್ಟರು. ಇರುಮುಡಿ ಕಟ್ಟಿಕೊಂಡ ಮಾಲಾಧಾರಿಗಳು ಇಂದು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಿಂದ ತಮ್ಮ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ ಕುಟುಂಬದವರಿಂದ ಬೀಳ್ಕೊಟ್ಟು ಶಬರಿಮಲೆ ಸ್ವಾಮಿ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ತೆರಳಿದರು. ಮಾಲಾಧಾರಿಗಳನ್ನು ಬೀಳ್ಕೊಡಲು ಅವರ ಕುಟುಂಬಸ್ಥರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹೆಚ್.ಆರ್.ರಾಮೇಗೌಡ, ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪಸ್ವಾಮಿಯವರ ಮಂಡಲ ಪೂಜೆ, ಜ್ಯೋತಿ ಮಹೋತ್ಸವವನ್ನು ಸ್ವಾಮಿಯ ದೇವಾಲಯದಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಯ್ಯಪ್ಪ ಮಾಲೆಯನ್ನು ಧರಿಸಿದ್ದಾರೆ. ಅಯ್ಯಪ್ಪ ಮಾಲೆಯನ್ನು ಧರಿಸಿದವರು ತಮ್ಮ ದೈನಂದಿನ ದುಶ್ಚಟಗಳನ್ನು ಕಡ್ಡಾಯವಾಗಿ ಬಿಡಬೇಕಿದೆ. ತಿಂಗಳ ಕಾಲ ಬೆಳಿಗ್ಗೆ ಚಳಿಯಲ್ಲಿ ಎದ್ದು ತಣ್ಣೀರ ಸ್ನಾನ ಮಾಡಿ, ಕಾಲಿಗೆ ಪಾದರಕ್ಷೆ ಹಾಕದೆ ಬರಿಗಾಲಿನಲ್ಲಿ ಸಂಚರಿಸಬೇಕಿದೆ. ಸ್ವಾಮಿಯ ನಾಮಸ್ಮರಣೆಯಲ್ಲಿದ್ದು ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿಸಿಕೊಂಡು ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಮಾಡಿ ಇರುಮುಡಿ ಅರ್ಪಿಸಿ ಬರುವುದು ಸಂಪ್ರದಾಯವಾಗಿದೆ ಎಂದರು.
ವರದಿ: ಗಿರೀಶ್ ಕೆ ಭಟ್.