ನವದೆಹಲಿ : ಒಡಿಶಾದ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದೂ ವರದಿಯಾಗಿದೆ.
ಪವಿತ್ರಾ ಪುರಿಯಲ್ಲಿ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ, ಭಗವಾನ್ ಬಲಭದ್ರನ ರಥವನ್ನು ಎಳೆಯುವಾಗ ಭಾರೀ ಭಕ್ತ ಸಮೂಹ ಮುಗಿಬಿದ್ದಾಗ ಈ ಕಾಲ್ತುಳಿತ ಉಂಟಾಗಿ 600ಕ್ಕೂ ಅಧಿಕ ಭಕ್ತರು ಗಾಯಗೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಶಾಸ್ತ್ರೋಕ್ತವಾಗಿ ಎಳೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಈ ಉತ್ಸವವು, ಜಗನ್ನಾಥ ದೇವಸ್ಥಾನದಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಗುಂಡಿಚ ದೇವಸ್ಥಾನಕ್ಕೆ ತನ್ನ ಸಹೋದರರಾದ ಬಲಭದ್ರ ಮತ್ತು ದೇವತೆ ಸುಭದ್ರಾರೊಂದಿಗೆ ಭಗವಾನ್ ಜಗನ್ನಾಥನ ಪ್ರಯಾಣಕ್ಕೆ ಸಾಕ್ಷಿಯಾಗುತ್ತದೆ.
ದೇವತೆಗಳು ಗುಂಡಿಯಂಚಿಗೆ ಹೋಗಿ, ಅಲ್ಲಿನ ದೇವಸ್ಥಾನದಲ್ಲಿ ಒಂದು ವಾರ ವಾಸಿಸುತ್ತಾರೆ ಮತ್ತು ನಂತರ ಇದೇ ರೀತಿಯ ಮೆರವಣಿಗೆಯಲ್ಲಿ ಹಿಂತಿರುಗುತ್ತಾರೆ.




