ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದ ತನಿಖೆಯನ್ನು ಸಿಐಡಿ ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ಸಂತ್ರಸ್ತೆಯ ತಾಯಿ ಗಂಭೀರ ಆರೋಪ ಮಾಡಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದ್ದಾರೆ.
ಅವರ ಮನವಿಯನ್ನು ಮಂಗಳವಾರ ಹೈಕೋರ್ಟ್ ಸ್ವೀಕರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ಪ್ರಕ್ರಿಯೆ ಅನುಸರಿಸದೇ ವಿಳಂಬ ಮಾಡುತ್ತಿದ್ದಾರೆ.
ಕೇಸ್ ಗೆ ಸಂಬಂಧಪಡದ ವ್ಯಕ್ತಿಗಳನ್ನು ಅನಗತ್ಯವಾಗಿ ಕರೆಸಿ ವಿಚಾರಣೆ ನಡೆಸಿ ಕಾಲಹರಣ ಮಾಡುತ್ತಿದ್ದಾರೆ. ಪ್ರಭಾವಿ ಆರೋಪಿ ರಕ್ಷಣೆಗೆ ಬೇಕಾದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಡುತ್ತಿರುವ ನನಗೆ ರಾಜ್ಯ ಸರ್ಕಾರ, ಸಿಐಡಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಿ ನಿವೃತ್ತ ನ್ಯಾಯಮೂರ್ತಿಯೊಬ್ಬರ ಮೇಲ್ವಿಚಾರಣೆಗೆ ವಹಿಸಬೇಕು ಎಂದು ಕೋರಿದ್ದಾರೆ.