ಬಂಟ್ವಾಳ: ಪುತ್ರಿಯೊಂದಿಗೆ ತಾಯಿಯೂ ಪಾಸ್ ಆದ ವಿಶೇಷವೊಂದು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ. ಪುತ್ರಿ ತ್ರಿಶಾರೊಂದಿಗೆ ಪಿಯುಸಿ ಉತ್ತೀರ್ಣರಾದ ತಾಯಿಯ ಹೆಸರು ರವಿಕಲಾ.
ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 584 ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರವಿಕಲಾ ಅವರು ಆರ್ಟ್ಸ್ ತೆಗೆದುಕೊಂಡು ಖಾಸಗಿಯಾಗಿ ಪರೀಕ್ಷೆ ಬರೆದು 275 ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.
ರವಿಕಲಾ ಖಾಸಗಿಯಾಗಿ ಪರೀಕ್ಷೆ ಬರೆದಿರುವುದರಿಂದ ಸಾಮಾನ್ಯ ವಿದ್ಯಾರ್ಥಿಗಳಂತೆ ಇಂಟರ್ನಲ್ ಅಂಕಗಳು ಇಲ್ಲದೇ ಇರುವುದರಿಂದ 480 ಅಂಕಗಳಲ್ಲಿ ಪರೀಕ್ಷೆ ನಡೆದಿದೆ.
1998ರಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿರುವ ರವಿಕಲಾ, ಪರೀಕ್ಷೆಯಲ್ಲಿ 403 ಅಂಕಗಳನ್ನು ಪಡೆದಿದ್ದರು. ಬಳಿಕ ಅವರಿಗೆ ಶಿಕ್ಷಣ ಮುಂದುವರಿಸಲಾಗಲಿಲ್ಲ. ಕಳೆದ ಹಲವು ವರ್ಷಗಳಿಂದ ತಾರಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದರು. ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ-ಯುಕೆಜಿ ಆಗುತ್ತದೆ. ಆದ್ದರಿಂದ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರಾಗಿರಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು.
ಹೀಗಾದಲ್ಲಿ ಮುಂದೆ ಕೆಲಸಕ್ಕೆ ತೊಂದರೆ ಆಗಬಹುದು ಎಂಬ ಆತಂಕದಿಂದ ರವಿಕಲಾ, ಪಿಯುಸಿ ಪರೀಕ್ಷೆ ಬರೆಯುವ ಮನಸ್ಸು ಮಾಡಿದ್ದರು. ಇದರ ಫಲವಾಗಿ 27 ವರ್ಷಗಳ ಬಳಿಕ ಮೊದಲ ಪ್ರಯತ್ನದಲ್ಲೇ ಪಿಯುಸಿ ಉತ್ತೀರ್ಣರಾಗಿದ್ದಾರೆ.
“ಪತಿ, ಮಕ್ಕಳು, ನಾದಿನಿ, ಇಲಾಖೆಯವರ ಸಹಕಾರದಿಂದ ತಯಾರಿ ನಡೆಸಿ ಪರೀಕ್ಷೆ ಬರೆದು ಪಾಸ್ ಆಗಿರುವ ಸಂತೋಷವಿದೆ” ಎಂದು ರವಿಕಲಾ ಹೇಳಿದರು.