ಹಾಸನ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಆರೋಪಿಯೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಕಾರಣ 40 ವರ್ಷ ಆದ್ರೂ ತಾಯಿ ಮದ್ವೆ ಮಾಡಿಲ್ಲ ಎಂದು ಪಾಪಿ ಪುತ್ರ ಈ ಕೃತ್ಯ ಎಸಗಿದ್ದಾನೆ.
40 ವರ್ಷ ವಯಸ್ಸಾದರೂ ಹೆತ್ತ ತಾಯಿ ಮದುವೆ ಮಾಡಲಿಲ್ಲ ಅಂತ ಆಕೆಯೊಂದಿಗೆ ಜಗಳವಾಡಿ ಪುತ್ರನೇ ಕೊಲೆ ಮಾಡಲು ಪ್ರಯತ್ನ ಮಾಡಿರುವ ಆರೋಪ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಕೇಳಿಬಂದಿದೆ.
ಉಮಾಶಂಕರ್ (40) ತನ್ನ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಯತ್ನ ಮಾಡಿರುವ ಆರೋಪಿ. ತಾಯಿ ಗಂಗಮ್ಮ ಇದೀಗ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ.
ಗಂಗಮ್ಮ ತನ್ನ ಮಗನಿಗೆ ಮದುವೆ ಮಾಡಲು ಸಾಕಷ್ಟು ಕಡೆ ವಧುವನ್ನು ನೋಡಲು ಮುಂದಾಗಿದ್ದರು. ಆದರೆ, ಕಳೆದ ವರ್ಷ ನಡೆದ ಕುಂಭಮೇಳಕ್ಕೆ ಉಮಾಶಂಕರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿ ವಾಪಸ್ ಬರುವಾಗ ಅಪಘಾತ ನಡೆದಿತ್ತು. ಇದರಿಂದಾಗಿ ಅವರ ಹೊಟ್ಟೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿ, ಕಳೆದ 10 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ.
ಉಮಾಶಂಕರ್ ಒಂದು ತಿಂಗಳಿನಿಂದ ಸರಿಯಾಗಿ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ, ಆತನಿಗೆ ಸ್ವಲ್ಪ ಬುದ್ಧಿ ಭ್ರಮಣೆಯಾದಂತೆ ಕಾಣುತ್ತಿದ್ದ. ಅಲ್ಲದೇ, ನನಗೆ ಮದುವೆ ಮಾಡು ಎಂದು ತಾಯಿ ಮತ್ತು ಸಂಬಂಧಿಕರನ್ನು ಪೀಡಿಸುತ್ತಿದ್ದ. ಆದರೆ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ವಧುವನ್ನು ಕೊಡಲು ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಇದೇ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಗಲಾಟೆ ನಡೆದಿದೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯೊಂದಿಗೆ ಮದುವೆ ವಿಚಾರವಾಗಿ ಗಲಾಟೆ ನಡೆದಿದೆ. ಇದೇ ವೇಳೆ ಮಗ ಮತ್ತು ತಾಯಿಯ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ವಯಸ್ಸಾದ ಅಮ್ಮನನ್ನು ಬಲವಾಗಿ ತಳ್ಳಿದ್ದರಿಂದ ಮನೆಯ ಪಕ್ಕದಲ್ಲಿನ ಜಮೀನಿನ ಒಳಗೆ ತಾಯಿ ಬಿದ್ದಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡ ಆರೋಪಿ ಉಮಾಶಂಕರ್ ಏಕಾಏಕಿ ತಾಯಿಯ ತಲೆ ಮೇಲೆ ಎತ್ತಿ ಹಾಕಿದ್ದಾನೆ. ಅದೃಷ್ಟವಶಾತ್ ಪ್ರಾಣ ಹೋಗಿರಲಿಲ್ಲ. ತಕ್ಷಣವೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.




