ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ ಆಗ್ರಹಿಸಿ ಧರಣಿ
ಬೆಳಗಾವಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ 10ನೇ ದಿನಕ್ಕೆ ಕಾಲಿಟ್ಟಿದ್ದು, ಈ ಧರಣಿ ಸ್ಥಳಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಶುಕ್ರವಾರ ರಾತ್ರಿ ಭೇಟಿ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ಸದಸ್ಯರು ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ, ಕುಡಚಿ ರೈಲು ನಿಲ್ದಾಣಕ್ಕೆ ಹಜರತ ಮಾಸಾಹೇಬಾ ಕುಡಚಿ ಜಂಕ್ಷನ ಎಂದು ನಾಮಕರಣ ಮಾಡುವುದು ಹಾಗೂ ವಿವಿಧ ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೂ ಮನವಿ ಸಲ್ಲಿಸಿದರು.
ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಮಾತನಾಡಿ, ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, 2010-11ರಲ್ಲಿ ಯುಪಿ ಸರ್ಕಾರವಿದ್ದಾಗ ಕುಡಚಿಗೆ ರೇಲ್ವೆ ಮಂಜೂರಾಗಿದೆ. ಇಲ್ಲಿ ನಿತ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಇತರ ಸಾರ್ವಜನಿಕರಿಗೆ ರೇಲ್ವೆ ಸೇವೆ ಸಮಪರ್ಕವಾಗಿ ಇಲ್ಲದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರವೇ ಇಲ್ಲಿರುವ ಸಮಸ್ಯೆಯನ್ನು ಕೇಂದ್ರದ ರೇಲ್ವೆ ಸಚಿವರ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥವಾಗುವಂತೆ ಮಾಡಲಾಗುವುದು. ಅಲ್ಲದೇ ಜನೇವರಿ ಮೊದಲ ವಾರಲ್ಲಿ ರೇಲ್ವೆ ಇಲಾಖೆಯ ಸಭೆ ನಡೆಯಲಿದ್ದು, ಕುಡಚಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಹೋರಾಟದ ಕುರಿತು ರೇಲ್ವೆ ಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು ಎಂದರು.
ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬುಢಾ ಮಾಜಿ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ ಸೇರಿದಂತೆ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ಸದಸ್ಯರು ಇದ್ದರು.




