Ad imageAd image

ಬಸವಣ್ಣನ ನಿಜ ಆದರ್ಶಗಳನ್ನು ಅರಿಯಲು ಮುಂದಾಗಿ : ಸದಾಶಿವಾನಂದ ಶ್ರೀ

Bharath Vaibhav
ಬಸವಣ್ಣನ ನಿಜ ಆದರ್ಶಗಳನ್ನು ಅರಿಯಲು ಮುಂದಾಗಿ : ಸದಾಶಿವಾನಂದ ಶ್ರೀ
WhatsApp Group Join Now
Telegram Group Join Now

ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗೀ ಶರಣರ ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣ ಅವರ ನೈಜ ಅದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಪ .ಪೂ. ಶ್ರೀ ಸದಾಶಿವಾನಂದಸದಾಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ನೆಹರೂನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣ ಅವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜಕ್ಕೆ ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಶರಣರ ವಚನಗಳು ಇಂದು ಸಮಾಜಕ್ಕೆ ಲಭ್ಯವಾಗಿರುವುದಕ್ಕೆ ವಚನ ಪಿತಾಮಹಾ ಫ.ಗು.ಹಳಕಟ್ಟಿ ಮತ್ತು ಭೂಶಿಮಠರ ಕಾರ್ಯ ಅನನ್ಯವಾಗಿದೆ. ಬಹಳಷ್ಟು ಮಹನೀಯರ ಅಪಾರ ಶ್ರಮ ಮತ್ತು ತ್ಯಾಗದ ಫಲದಿಂದ ಎಲ್ಲೆಲ್ಲೊ ಕಳೆದು ಹೋಗಿದ್ದ ಶರಣರ ವಚನಗಳು ನಮಗೆಲ್ಲಾ ಓದಲು ಮತ್ತು ಅಧ್ಯಯನ ಮಾಡಲು ಲಭ್ಯವಾಗಿವೆ. ಆದ್ದರಿಂದ ಶರಣರ ವಚನಗಳನ್ನು ಓದುವುದರ ಮತ್ತು ಅಧ್ಯಯನದ ಮೂಲಕ ನಾವೆಲ್ಲರೂ ಶರಣ ಆಶಯಗಳನ್ನು ಅರಿಯಲು ಮುಂದಾಗಬೇಕು ಎಂದರು.

ಅಲ್ಲಮ ಪ್ರಭು ಅವರು ಬಸವಣ್ಣನನ್ನು ಯುಗದ ಉತ್ಸಾಹ ಎಂದು ಕರೆದಿದ್ದಾರೆ. ಶರಣೆ ಅಕ್ಕ ನಾಗಮ್ಮ ತಮ್ಮ ವಚನಗಳಲ್ಲಿ ಬಸವಣ್ಣ ಅವರ ಕಾರ್ಯ ಮತ್ತು ಅದರ್ಶಗಳನ್ನು ಅತ್ಯಂತ ನೈಜ ರೂಪದಲ್ಲಿ ವಿವರಣೆ ನೀಡಿದ್ದಾರೆ. ಆದ್ದರಿಂದ ಬಸವಣ್ಣ ಅವರನ್ನು ಅರಿಯಲು ಅಕ್ಕ ನಾಗಮ್ಮ ಅವರ ವಚನಗಳನ್ನು ವಾಚಿಸಬೇಕು. ಆ ಶಿವಶರಣರ ಪಾಂಡಿತ್ಯಕ್ಕೆ ಸಮ ಪ್ರಸಕ್ತ ದಿನಗಳಲ್ಲಿ ನಾವು ಯಾರು ಇಲ್ಲ. ಆದ್ದರಿಂದ ಶರಣರ ವಚನಗಳನ್ನು ಮೂಲ ರೂಪದಲ್ಲಿರುವಂತೆ ಓದಲು ಮತ್ತು ಅಧ್ಯಯನಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ವಚನ ದರ್ಶನ ಕೃತಿಯ ಪರಿಚಯ ಮಾಡಿಕೊಟ್ಟರು. ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ ಮತ್ತು ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ ಬಗ್ಗೆ ಸವಿವರವಾದ ಮಾಹಿತಿ ವಚನ ದರ್ಶನ ಕೃತಿ ಒಳಗೊಂಡಿದೆ. ಸಾಮಾನ್ಯ ಲಿಂಗಾಯತರು ಮನೆಯಲ್ಲಿ ಲಿಂಗಪೂಜೆ ಮತ್ತು ವಚನ ಅಧ್ಯಯನ ಕುರಿತಂತೆ ಮುಂದಿನ ಪೀಳಿಗೆಗೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದರು.

ಸಾಹಿತಿ ಮತ್ತು ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ ಮಾತನಾಡಿ, ಬಸವಕಲ್ಯಾಣ ಕೇಂದ್ರಿತವಾದ ಶರಣ ಸಾಹಿತ್ಯವು, ದೇಶ ಮಾತ್ರವಲ್ಲದೆ ದೂರದ ಅಫಘಾನಿಸ್ಥಾನದವರೆಗೂ ಹಬ್ಬಿತ್ತು. ಅನೇಕ ವಿದೇಶಿಗರು ಶರಣರ ಸಾಹಿತ್ಯ ಮತ್ತು ಭಕ್ತಿಪರಂಪರೆಗೆ ಪ್ರಭಾವಿತರಾಗಿ ಅನುಭವ ಮಂಟಪಕ್ಕೆ ಆಗಮಿಸಿ, ವಚನ ರಚಿಸಿದ್ದಾರೆ. ಈ ಸಂಗತಿಯು ೧೨ನೇ ಶತಮಾನದ ಶರಣರ ಮತ್ತು ವಚನ ಸಾಹಿತ್ಯದ ಪ್ರಭಾವ ಮತ್ತು ಶಕ್ತಿಗೆ ಸಾಕ್ಷಿಕರಿಸುತ್ತದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪ್ರಬುದ್ಧ ಭಾರತದ ಸಂಯೋಜಕಿ ಡಾ. ಅಲ್ಕಾ ಕಾಳೆ, ಡಾ. ಬಸವರಾಜ ಜಗಜಂಪಿ, ಡಾ.ಜೆ. ಮಂಜಣ್ಣಾ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

ಡಾ. ಶೈಲಜಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ. ನಯನಾ ಗಿರಿಗೌಡರ ಅವರಿಂದ ವಚನ ಗಾಯನ ಪ್ರಸ್ತುತ ಪಡಿಸಿದರು. ಡಾ. ಶರಯೂ ಪೊಟ್ನೀಸ್ ಕಾರ್ಯಕ್ರಮ ನಿರೂಪಿಸಿದರು, ಡಾ. ಸ್ಮಿತಾ ಸುರೇಬಾನಕರ್ ಸ್ವಾಗತ ಭಾಷಣ ಮಾಡಿದರು, ಡಾ. ಶೈಲಜಾ ಹೀರೆಮಠ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮದ ಆಶಯ ತಿಳಿಸಿದರು ಹಾಗೂ ಅಪ್ಪಯ್ಯ ರಾಮರಾವ್ ಅವರು ವಂದನಾರ್ಪಣೆ ಮಾಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!