ತುರುವೇಕೆರೆ: ಪ್ರಸ್ತುತ ದಿನಗಳಲ್ಲಿ ರೈತರು ಒಂದೇ ಬೆಳೆಯನ್ನು ನಂಬಿ ವ್ಯವಸಾಯ ಮಾಡುವ ಬದಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕಾಭಿವೃದ್ದಿಯನ್ನು ಹೊಂದಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಂಗಾರು ಹಂಗಾಮಿನ ಬೀಜ ವಿತರಣೆ, ಸಸ್ಯ ಸಂರಕ್ಷಣಾ ಯೋಜನೆಯಡಿ ಬೀಜೋಪಚಾರ ಆಂದೋಲನ, ಕೀಟನಾಶಕಗಳ ಸುರಕ್ಷತಾ ಬಳಕೆ ಅರಿವು ಮತ್ತು ಕೃಷಿ ಪರಿಕರ ವಿತರಣಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಕೃಷಿ ಇಲಾಖೆ ಮೂಲಕ ರೈತರಿಗೆ ಬೇಕಾದ ಅಗತ್ಯ ಕೃಷಿ ಪರಿಕರಗಳು ಹಾಗೂ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುತ್ತಿದೆ. ಇದಲ್ಲದೆ ಕೃಷಿ ವಿಜ್ಞಾನಿಗಳಿಂದ ಆಗಿಂದಾಗ್ಗೆ ಅಗತ್ಯ ಆಧುನಿಕ ಕೃಷಿ ಪದ್ದತಿಗಳ ಬಗ್ಗೆ ಮಾಹಿತಿಯನ್ನೂ ಸಹ ನೀಡುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಇಲಾಖೆಯ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ಲಾಭದಾಯಕ ಕೃಷಿಗೆ ಒತ್ತು ನೀಡಿ ವ್ಯವಸಾಯ ಮಾಡುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಸಹಾಯಕ ಕೃಷಿ ಇಲಾಖೆ ನಿರ್ದೇಶಕಿ ಪೂಜಾ ಮಾತನಾಡಿ, ಈಗಾಗಲೇ ಪೂರ್ವ ಮುಂಗಾರು ಪ್ರಾರಂಭವಾಗಿದ್ದು, ರೈತರಿಗೆ ಅಗತ್ಯವಿರುವ ಹೆಸರು, ಉದ್ದು, ಹಲಸಂದೆ ಸೇರಿದಂತೆ ಇತ್ಯಾದಿ ಭಿತ್ತನೆ ಬೀಜಗಳು ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿದೆ. ರೈತರು ಅಗತ್ಯ ದಾಖಲೆಗಳನ್ನು ಒದಗಿಸಿ ಭಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಕೃಷಿ ಇಲಾಖೆ ಹಾಗೂ ಸಂಪರ್ಕ ಕೇಂದ್ರಗಳಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕೃಷಿ ಬೇಕಾದ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲಾಖೆಯಿಂದ ರೈತರಿಗೆ ಅಗತ್ಯ ಕೃಷಿ ಪರಿಕರಗಳನ್ನು ವಿತರಿಸುತ್ತಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.
ಕೊನೆಹಳ್ಳಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪದ್ಮನಾಭ ಅವರು ಮುಂಗಾರು ಮಳೆ ಕುರಿತಂತೆ ಹಾಗೂ ಮುಂಗಾರಿನಲ್ಲಿ ಬೆಳೆಯಬಹುದಾದ ಬೆಳೆಗಳ ಕುರಿತಂತೆ ರೈತರಿಗೆ ಅಗತ್ಯ ಮಾಹಿತಿ ನೀಡಿದರು. ಅರ್ಹ ರೈತಪಲಾನುಭವಿಗಳಿಗೆ ಹಾರೆ, ಗುದ್ದಲಿ, ನೇಗಿಲು, ಟಾರ್ಪಾಲಿನ್, ಕೀಟನಾಶಕ, ಭಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಪ್ರಗತಿಪರ ಕೃಷಿಕರಿಗೆ ಆತ್ಮಶ್ರೇಷ್ಠ ಪ್ರಶಸ್ತಿ ನಿಡಿ ಸನ್ಮಾನಿಸಲಾಯಿತು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ತಾಳಕೆರೆ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಮಚಂದ್ರಯ್ಯ, ಖಜಾಂಚಿ ಬಸವರಾಜಪ್ಪ, ಸದಸ್ಯರಾದ ಹೆಚ್.ಆರ್.ರಾಮೇಗೌಡ, ಎನ್.ಆರ್.ಸುರೇಶ್, ಬಸವರಾಜು ಸೇರಿದಂತೆ ಇಲಾಖಾಧಿಕಾರಿಗಳು, ರೈತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್