ತುರುವೇಕೆರೆ: ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ 20ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಸುಮಾರು 28 ಲಕ್ಷ ರೂ ವೆಚ್ಚದ ಮಾದಿಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಕಾರ್ಯಾಲಯ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರದಿಂದ ಮಾದಿಹಳ್ಳಿ ಗ್ರಾಮ ಪಂಚಾಯ್ತಿ ನೂತನ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ 28 ಲಕ್ಷ ರೂ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿಸಿದ್ದು, ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣವಾಗಬೇಕು. ಗುತ್ತಿಗೆದಾರರು ಕಾಮಗಾರಿಯಲ್ಲಿ ಯಾವುದೇ ಲೋಪವಿಲ್ಲದಂತೆ ಬಹಳ ವರ್ಷಕಾಲ ಬಾಳಿಕೆ ಬರುವಂತೆ ಕಟ್ಟಡ ನಿರ್ಮಿಸಬೇಕು. ಮಾದಿಹಳ್ಳಿ ಪಂಚಾಯ್ತಿ ಅಧ್ಯಕ್ಷರು, ಸದಸ್ಯರುಗಳು ಕಟ್ಟಡ ಕಾಮಗಾರಿಯ ಬಗ್ಗೆ ಗಮನಹರಿಸಬೇಕು. ಸರ್ಕಾರದ ಹಣ ದುರುಪಯೋಗವಾಗಬಾರದು. ಸುಸಜ್ಜಿತ ಕಟ್ಟಡ ನಿರ್ಮಾಣವಾದರೆ ಪಂಚಾಯ್ತಿಯ ಆಡಳಿತ ವ್ಯವಹಾರಕ್ಕೆ, ಸಭೆಗಳಿಗೆ ಅನುಕೂಲವಾಗಲಿದೆ ಎಂದರು.
ಅರಳೀಕೆರೆ ಗ್ರಾಮದಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು, ಉದ್ಘಾಟನೆ ಮಾಡಲಾಗಿದೆ. ಈ ದಿನದಿಂದಲೇ ಅಂಗನವಾಡಿ ಕಾರ್ಯನಿರ್ವಹಿಸಲಿದ್ದು, ಪುಟಾಣಿ ಮಕ್ಕಳಿಗಾಗಿ ಉತ್ತಮ ಗುಣಮಟ್ಟದಲ್ಲಿ ಅಂಗನವಾಡಿ ನಿರ್ಮಿಸಲಾಗಿದೆ. ಅಂಗನವಾಡಿ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲತಾಯೋಗಾನಂದ್, ಉಪಾಧ್ಯಕ್ಷ ಹರೀಶ್, ಸದಸ್ಯರಾದ ಬೊಮ್ಮಲಿಂಗಯ್ಯ, ಮಂಜುನಾಥ್, ಅನುಸೂಯ, ಜಗದೀಶ್, ವೆಂಕಟೇಶ್, ಕಾಳಮ್ಮರವೀಶ್, ನಂಜಮ್ಮ, ಶೃತಿಲಕ್ಷ್ಮೀಕಾಂತ್, ನಂಜುಂಡಯ್ಯ, ಗಿರೀಶ್, ವಿನೋದಮಂಜುನಾಥ್, ದಿವ್ಯರಂಗನಾಥಗೌಡ, ಕೆಂಪಯ್ಯ, ಶಿವಮ್ಮ, ಪಿಡಿಒ ಸುರೇಶ್, ಕಾರ್ಯದರ್ಶಿ ನರೇಂದ್ರ, ಜೆಡಿಎಸ್ ಮುಖಂಡರಾದ ಯೋಗಾನಂದ್, ಮಾದಿಹಳ್ಳಿ ಕಾಂತರಾಜು, ವೆಂಕಟಾಪುರ ಯೋಗೀಶ್, ಗ್ರಾಮಸ್ಥರಾದ ಕೃಷ್ಣಪ್ಪ, ಚಂದ್ರಣ್ಣ, ಸಿದ್ದೇಗೌಡ, ಶಿವರಾಜ್, ಕೆಂಪೇಗೌಡ, ಕುಮಾರ್, ಸದಾಶಿವಯ್ಯ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್