ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರೀ 36 ಸ್ಥಾನ ಸಿಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೇಂದ್ರ ಸರ್ಕಾದರ ವಿಶೇಷ ಅಡಿಪ್ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಮಾರುಹೋಗಿ ಕಾಂಗ್ರೆಸ್ಗೆ ಮತ ನೀಡಿ 136 ಸ್ಥಾನದಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತಂದರು. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಅನುದಾನ ಹೊಂದಿಸುವಲ್ಲಿ ಸಾಧ್ಯವಾಗದೆ ಜನಸಾಮಾನ್ಯರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಕ್ಸ್ ರಾಮಯ್ಯ ಎಂದು ಕರೆದರೂ ಯಾವುದೇ ತಪ್ಪಿಲ್ಲ ಎಂದರು.
ಒಂದು ಕಡೆಯಿಂದ ಗಂಡನಿಂದ ಹಣ ವಸೂಲಿ ಮಾಡುವ ಸರ್ಕಾರ ಅದನ್ನೇ ಮತ್ತೊಂದು ರೀತಿಯಲ್ಲಿ ಹೆಂಡತಿಗೆ ನೀಡುತ್ತಿದೆ. ಈ ರೀತಿಯ ಗಿಮಿಕ್ ಹೆಚ್ಚು ದಿನ ನಡೆಯುವುದಿಲ್ಲ. ದಿನನಿತ್ಯ ಬಳಸುವ ಪದಾರ್ಥಗಳ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲಿದ್ದಾರೆ. 136 ಸೀಟು ನೀಡಿರುವ ರಾಜ್ಯದ ಜನತೆ 100 ಸ್ಥಾನಗಳನ್ನು ಕಿತ್ತುಹಾಕಿ ಕೇವಲ 36 ಸ್ಥಾನ ಮಾತ್ರ ನೀಡಲಿದ್ದಾರೆಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್