ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ಮುಡಾಗೆ ವಾಪಾಸ್ ನೀಡಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಮತ್ತೊಂದು ಕ್ಯಾತೆ ಶುರುಮಾಡಿದ್ದು, ಮುಡಾ ಸೈಟ್ ವಾಪಾಸ್ ರಾಜಕೀಯ ಡ್ರಾಮಾ ಎಂದು ಕಿಡಿಕಾರಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೂಡಾ ಸೈಟ್ ವಾಪಾಸ್ ನೀಡಿರುವುದು ರಾಜಕೀಯ ಡ್ರಾಮಾ. ಕಾನೂನಿನ ಕುಣಿಕೆಯಿಂದ ಪಾರಾಗಲು, ಅನುಕಂಪ ಪಡೆಯಲು ಸಿದ್ದರಾಮಯ್ಯ ಸೈಟ್ ವಾಪಾಸ್ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ವಪಕ್ಷದಲ್ಲೇ ತೊಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ ಅವರ ಲೆಕ್ಕಾಚಾರ. ಸಿಎಂ ಸಿದ್ದರಾಮಯ್ಯನವರು ಭಂಡತನವನ್ನು ಬಿಟ್ಟು ರಾಜೀನಾಮೆ ಕೊಡಬೇಕು. ರಾಜೀನಾಮೆಗೂ ಮುನ್ನ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ನಾವು ಅಹೋರಾತ್ರಿ ಧರಣಿ ನಡೆಸಿದರೂ ಅಧಿವೇಶನ ಮೊಟಕುಗೊಳಿಸಿ ಸಿದ್ದರಾಮಯ್ಯ ಪಲಾಯನ ಮಾಡಿದರು. ಬಿಜೆಪಿ, ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರಿಗೆ ಪಾದಯಾತ್ರೆ ಮಾಡಿತು. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಈಗ ನಿನ್ನೆ ರಾತ್ರಿ ಮಹತ್ತರ ಬೆಳವಣಿಗೆಯೊಂದರಲ್ಲಿ ಸಿಎಂ ಪತ್ನಿ ಪಾರ್ವತಿ ಅವರು ಏಕಾಏಕಿ ಮುಡಾದ 14 ನಿವೇಶನಗಳನ್ನು ಸಿಎಂ ಹಾಗೂ ಪುತ್ರನ ಗಮನಕ್ಕೂ ತರದೇ ಸಿಎಂ ಅಧಿಕೃತ ನಿವಾಸದಿಂದಲೇ ಪತ್ರ ಬರೆದು ವಾಪಾಸ್ ಕೊಡುವುದಾಗಿ ಹೇಳುತ್ತಾರೆ.
ಸಿಎಂ ಪತ್ನಿಯವರು ಅವರಾಗಿಯೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆದಿದ್ದಾರೋ ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅಂತಾ ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನ್ಯಾಕೆ ಸೈಟ್ ವಾಪಾಸ್ ಕೊಡಬೇಕು? ನನಗೆ 62 ಕೋಟಿ ಕೊಡ್ತಾರಾ? ಎಂತಾ ಕೇಳಿದ್ದರು.
ಈಗ ಕೋರ್ಟ್ ತನಿಖೆಗೆ ಆದೇಶ ನೀಡುತ್ತಿದ್ದಂತೆ ಏಕಾಏಕಿ ಸೈಟ್ ವಾಪಾಸ್ ಕೊಟ್ಟಿರುವುದು ನೋಡಿದರೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವುದು ಎಂಬುದು ಸ್ಪಷ್ಟ. ಇದು ಸಿದ್ದರಾಮಯ್ಯ ಅವರ ರಾಜಕೀಯ ಡ್ರಾಮಾ ಎಂದು ಕಿಡಿಕಾರಿದರು.