ಬೆಂಗಳೂರು: ಯಾವುದೇ ವಿಶ್ರಾಂತಿ ಇಲ್ಲದೇ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಚಿನಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ’ ಎಂದು ಚಿಕ್ಕಬಾಣಾವರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.

ಚಿಕ್ಕಬಾಣಾವರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವೈದ್ಯರಿಗಿಂತಲೂ ಪೌರ ಕಾರ್ಮಿಕರು ನಮ್ಮಗಳ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಪ್ರಮುಖರು ಎಂದರೆ ತಪ್ಪಾಗಲಾರದು. ಸರ್ಕಾರದ ಸೌಲಭ್ಯಗಳನ್ನು ಪೌರ ಕಾರ್ಮಿಕರಿಗೆ ಮೊದಲು ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಪೌರ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಮಾತನಾಡಿ, ‘ಪೌರ ಕಾರ್ಮಿಕರಿಗೆ ಸಿಗಬೇಕಾದ ಹಕ್ಕುಗಳನ್ನು ಅವರಿಗೆ ಕೊಡಿಸುವುದು ನಮ್ಮ ಆದ್ಯತೆಯಾಗಬೇಕು. ಕಸ ಕಂಡರೆ ಪೌರ ಕಾರ್ಮಿಕರನ್ನು ಬೈಯುವುದನ್ನು ರೂಡಿಸಿಕೊಂಡಿರುವ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಬಿಡಬೇಕು’ಎಂದು ತಿಳಿಸಿದರು.
ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ದಾಸರಹಳ್ಳಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಅನುಭವಿ ಹಿರಿಯ ಪತ್ರಕರ್ತ ಎಚ್.ಆರ್ ರವೀಶ್, ಕಂದಾಯ ಅಧಿಕಾರಿ ರಮೇಶ್, ಕಂದಾಯ ನಿರೀಕ್ಷಕ ಶಿವಕುಮಾರ್, ಕಲ್ಯಾಣ ಇಲಾಖೆಯ ಶ್ಯಾಮಲಾ, ಎಂಜಿನಿಯರ್ ಗಳಾದ ಸುಮತಿ, ಸುಮಾ, ಆರೋಗ್ಯ ಇಲಾಖೆಯ ಅಧಿಕಾರಿ ಬಸವರಾಜು, ಕಚೇರಿಯ ಸಿಬ್ಬಂದಿಗಳಾದ ದಾನಪ್ಪ, ಸೌಮ್ಯ, ಗೀತಾ ಪೌರ ಕಾರ್ಮಿಕರು ಮುಂತಾದವರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




