ಮೈಸೂರು : ಮೈಸೂರಲ್ಲಿ ಚಿನ್ನಕ್ಕಾಗಿ ನಡೆದಿದ್ದ ಯುವಕನ ಹತ್ಯೆ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನ ಕದ್ದು ಗಿರವಿಯಿಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಹತ್ಯೆ ಏಪ್ರಿಲ್ ನಲ್ಲಿ ಮಾಡಲಾಗಿತ್ತು. ಇದೀಗ ಇಡೀ ಕೇಸ್ ನ ಆರೋಪಿಗಳು ಲಾಕ್ ಆಗಿದ್ದಾರೆ.
ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ (31) ಕೊಲೆಯಾದ ಯುವಕ ಎಂದು ಗುರುತಿಸಲಾಗಿತ್ತು. 60 ಗ್ರಾಂ ಚಿನ್ನಕ್ಕಾಗಿ ಯುವಕ ಮೋಹನ್ ರನ್ನು ಕಾರಿನಲ್ಲೇ ಹೊಡೆದು ಹತ್ಯೆ ಮಾಡಿದ ಆರೋಪಿಗಳು ಶವ ಸುಟ್ಟು ಹಾಕಿದ್ದರು.
ಏ.18 ರಂದು ನಡೆದಿದ್ದ ಕೊಲೆ ಕೇಸ್‌ನಲ್ಲಿ ಒಟ್ಟು 4 ಆರೋಪಿಗಳ ಬಂಧನವಾಗಿದ್ದು, ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ..
ಹತ್ಯೆಯಾದ ಮೋಹನ್ ಕುಮಾರ್ ಬೋಗಾದಿ ಲಾಡ್ಜ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಲಾಡ್ಜ್ನಲ್ಲಿ ಇಸ್ಪೀಟ್ ಆಟವಾಡಲು ಕೊಲೆ ಆರೋಪಿ ಶ್ರೀನಿವಾಸ್ ಬರುತ್ತಿದ್ದ. ಶ್ರೀನಿವಾಸ್ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಇದನ್ನು ಮೋಹನ್ ಕುಮಾರ್ ಕಳವು ಮಾಡಿದ್ದ ಎನ್ನಲಾಗಿದೆ. ಕದ್ದ ಸರವನ್ನು ಗಿರವಿ ಇಟ್ಟು ಸ್ವಗ್ರಾಮ ಬ್ಯಾಡರಪುರಕ್ಕೆ ಹೋಗಿ ಕದ್ದ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎನ್ನಲಾಗಿದೆ.
ಶ್ರೀನಿವಾಸ್ ತನ್ನ ಗೆಳೆಯರ ಗ್ಯಾಂಗ್ ಕಟ್ಟಿಕೊಂಡು ಮೋಹನ್ ಕುಮಾರ್ ನನ್ನು ಮನೆಯಿಂದ ಕರೆಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ. ಯಾರಿಗೂ ತಿಳಿಯದಂತೆ ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟುಹಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿ ಎಲ್ಲವನ್ನು ಬಯಲಿಗೆಳೆದಿದ್ದಾರೆ.



