ಬೆಂಗಳೂರು: ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿ, ಬಳಿಕ ಆಕೆಯ ದೇಹವನ್ನು ತುಂಡರಿಸಿ ಸೂಟ್ಕೇಸ್ನಲ್ಲಿ ತುಂಬಿಟ್ಟಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿಯ ಪೋಷಕರಿಗೆ ಕರೆ ಮಾಡಿದ ಆರೋಪಿ: ಹುಳಿಮಾವು ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಸಾಂಬೆಕರ್ (32) ಎಂಬವಳನ್ನು ಕೊಲೆಗೈದು, ಬಳಿಕ ಮೃತದೇಹವನ್ನು ತುಂಡು ತುಂಡು ಮಾಡಿ ಸೂಟ್ಕೇಸ್ನಲ್ಲಿ ತುಂಬಿಟ್ಟಿದ್ದ. ನಂತರ ‘ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದಾಗಿ’ ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಇದರಿಂದ ಬೆಚ್ಚಿಬಿದ್ದ ಗೌರಿ ಪೋಷಕರು ಕೂಡಲೇ ಮಹಾರಾಷ್ಟ್ರದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರಾಕೇಶ್ ಕೃತ್ಯವನ್ನು ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರು ನೀಡಿದ ಸೂಚನೆ ಆಧರಿಸಿ, ಬೆಂಗಳೂರಿನ ಹುಳಿಮಾವು ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೃತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಕಾರಣ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರದ್ದೂ ವರ್ಕ್ ಫ್ರಂ ಹೋಮ್: 2 ವರ್ಷಗಳ ಹಿಂದೆ ಮದುವೆಯಾಗಿದ್ದ ರಾಕೇಶ್ ಹಾಗೂ ಗೌರಿ ಒಂದು ತಿಂಗಳ ಹಿಂದಷ್ಟೆ ದೊಡ್ಡಕಮ್ಮನಹಳ್ಳಿಯಲ್ಲಿ ಮನೆ ಪಡೆದು ವಾಸವಿದ್ದರು. ಇಬ್ಬರೂ ಸಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ವರ್ಕ್ ಫ್ರಂ ಹೋಮ್ ಇದ್ದ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
‘ಮಹಾರಾಷ್ಟ್ರ ಪೊಲೀಸರು ನಮ್ಮ ಕಂಟ್ರೋಲ್ ರೂಂಗೆ ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯ ಬಾತ್ ರೂಮ್‌ನಲ್ಲಿ ಸೂಟ್ ಕೇಸ್‌ನಲ್ಲಿ ಮಹಿಳೆ ಗೌರಿಯ ಮೃತದೇಹ ಪತ್ತೆಯಾಗಿದೆ. ಪರಾರಿಯಾಗಿದ್ದ ಆರೋಪಿ ರಾಕೇಶ್ನನ್ನು ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ಸೋಕೋ ತಂಡದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ” ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ಧಾರೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.