————————————————————————–ಡಿ.ಕಲ್ಕೆರೆ ಹಾಲು ಉತ್ಪಾದರ ಸಂಘದ ಚುನಾವಣೆ
ತುರುವೇಕೆರೆ: ತಾಲ್ಲೂಕಿನ ಡಿ.ಕಲ್ಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಉದ್ಯಮಿ ನಯಾಜ್ ಪಾಷ ನೇತೃತ್ವದ ತಂಡ ಭರ್ಜರಿ ಜಯಗಳಿಸಿದೆ.
ಡಿ.ಕಲ್ಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 240 ಮಂದಿ ಷೇರುದಾರರಿದ್ದು, ಸಂಘದ 13 ಮಂದಿ ನಿರ್ದೇಶಕರ ಆಯ್ಕೆಗೆ ಆಗಸ್ಟ್ 03 ಭಾನುವಾರದಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಂಘದ 13 ಸ್ಥಾನಗಳಿಗೆ 27 ಮಂದಿ ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು. ಚುನಾವಣೆ ನಡೆದು ಫಲಿತಾಂಶ ಹೊರಬಂದಾಗ 13 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಉದ್ಯಮಿ ನಯಾಜ್ ಪಾಷ ನೇತೃತ್ವದ ತಂಡ ಜಯಗಳಿಸಿ ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುವ ಹೊಸ್ತಿಲಿಗೆ ಬಂದು ನಿಂತಿದೆ.

ಸಂಘದ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ (ಮುತ್ತಣ್ಣ), ಉದ್ಯಮಿ ನಯಾಜ್ ಪಾಷ ನೇತೃತ್ವದ ತಂಡದಲ್ಲಿ ಕೆ.ವಿ.ಮೃತ್ಯುಂಜಯ, ಕೆ.ಜೆ.ರವಿ, ಕೆ.ಜೆ.ಕಣ್ಣನ್, ನಯಾಜ್ ಪಾಷ, ಪರಮೇಶ್ವರಯ್ಯ, ಪುಟ್ಟಮ್ಮ, ಶೇಷಗಿರಿ, ಶ್ರೀಕಂಠೇಗೌಡ, ಕೆ.ವಿ.ರವಿಕುಮಾರ್, ಪದ್ಮ ಜಯಗಳಿಸಿದರೆ, ಮತ್ತೊಂದು ತಂಡದಲ್ಲಿ ಕೆ.ಪಿ.ನವೀನ್ ಕುಮಾರ್, ಕೃಷ್ಣಪ್ಪ, ಚಿಕ್ಕರಂಗಯ್ಯ ಜಯಗಳಿಸಿದರು.
ವಿಜೇತ ನೂತನ ನಿರ್ದೇಶಕರುಗಳು ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವಿಜೇತ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಡಿ.ಕಲ್ಕೆರೆ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಮೃತ್ಯುಂಜಯ ಮತ್ತು ನಯಾಜ್ ಪಾಷ ಮಾಧ್ಯಮದೊಂದಿಗೆ ಮಾತನಾಡಿ, ಸಂಘದ ನಿರ್ದೇಶಕರ ಚುನಾವಣೆಯಲ್ಲಿ ನಮ್ಮ ತಂಡ ಭರ್ಜರಿ ಜಯಗಳಿಸಿರುವುದು ಬಹಳ ಸಂತೋಷ ತಂದಿದೆ. ಸಂಘದ ಷೇರುದಾರರು ನಮ್ಮ ತಂಡದ ಮೇಲೆ ಭರವಸೆಯಿಟ್ಟು ನಮ್ಮನ್ನು ಹೆಚ್ಚಿನ ಮತ ನೀಡಿ ಆರ್ಶೀವದಿಸಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬರದಂತೆ ಸಂಘದ ಅಭಿವೃದ್ದಿಗೆ, ಷೇರುದಾರರ ಪ್ರಗತಿಗೆ ಕೆಲಸ ನಿರ್ವಹಿಸಲಾಗುವುದು. ಸಂಘದ ಎಲ್ಲಾ ಷೇರುದಾರರಿಗೆ ಧನ್ಯವಾದಗಳನ್ನು ಅರ್ಪಿಸಲಾಗುವುದು ಎಂದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




