Ad imageAd image

ಮ್ಯಾನ್ಮಾರ್ ಭೂಕಂಪನ: 1600 ದಾಟಿದ ಸಾವಿನ ಸಂಖ್ಯೆ, 3400 ಕ್ಕೂ ಹೆಚ್ಚು ಜನರು ಗಾಯ

Bharath Vaibhav
ಮ್ಯಾನ್ಮಾರ್ ಭೂಕಂಪನ: 1600 ದಾಟಿದ ಸಾವಿನ ಸಂಖ್ಯೆ, 3400 ಕ್ಕೂ ಹೆಚ್ಚು ಜನರು ಗಾಯ
WhatsApp Group Join Now
Telegram Group Join Now

ಭಾರತದಿಂದ ಸಹಾಯ ಹಸ್ತ

ಮ್ಯಾನ್ಮಾರ್​​: ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್​ನಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶನಿವಾರ ಸಂಜೆ ವೇಳೆ ಮೃತರ ಸಂಖ್ಯೆ 1600 ದಾಟಿದ್ದು, 3400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದರಿಂದ ಹಲವಾರು ಕಟ್ಟಡಗಳು, ಸೇತುವೆಗಳು ನೆಲಸಮವಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಿಂದ ಈಗಾಗಲೇ ಹಲವು ಮೃತದೇಹಗಳನ್ನು ಹೊರೆತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ರಕ್ಷಣಾ ಕಾರ್ಯಕರ್ತರು ಕುಸಿದ ಕಟ್ಟಡಗಳ ಅವಶೇಷಗಳನ್ನು ಅಗೆದು ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮ್ಯಾನ್ಮಾರ್‌ನಲ್ಲಿ ಕನಿಷ್ಠ 1,644 ಜನರು ಸಾವನ್ನಪ್ಪಿದ್ದು, 3,400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕನಿಷ್ಠ 139 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಬ್ಯಾಂಕಾಕ್‌ನಲ್ಲಿ ಸುಮಾರು 10 ಸಾವುಗಳು ದೃಢಪಟ್ಟಿವೆ.

ಸಂವಹನ ವ್ಯವಸ್ಥೆ ಕಡಿತವಾಗಿರುವುದರಿಂದ ವಿಪತ್ತಿನ ನಿಜವಾದ ಪ್ರಮಾಣ ನಿಧಾನವಾಗಿ ಗೊತ್ತಾಗುತ್ತಿದೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.

ಭಾರತದಿಂದ ಆಪರೇಷನ್ ಬ್ರಹ್ಮ: ಪಕೃತಿಯ ಅಟ್ಟಹಾಸಕ್ಕೆ ತುತ್ತಾಗಿರುವ ಮ್ಯಾನ್ಮಾರ್​ಗೆ ಹಲವು ದೇಶಗಳು ನೆರವಿನಹಸ್ತ ಚಾಚಿದ್ದು, ಭಾರತ ಈಗಾಗಲೇ ಟೆಂಟ್​ಗಳು, ಕಂಬಳಿಗಳು, ನೆಲಹಾಸಿಗೆಗಳು, ಆಹಾರ ಪೊಟ್ಟಣಗಳು, ನೈರ್ಮಲ್ಯ ಕಿಟ್​ಗಳು, ಜನರೇಟರ್​ಗಳು ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಿದೆ. 15 ಟನ್​ ಪರಿಹಾರ ಸಾಮಗ್ರಿಗಳ ಮೊದಲ ಕಂತು ಯಾಂಗೋನ್​ನಲ್ಲಿ ಬಂದಿಳಿದಿದ್ದು, ರಾಯಭಾರಿ ಅಭಯ್​ ಠಾಕೂರ್​ ಅವರು ಯಾಂಗೋನ್​ ಮುಖ್ಯಮಂತ್ರಿ ಯು ಸೋ ಥೀನ್​ ಅವರಿಗೆ ಹಸ್ತಾಂತರಿಸಿದ್ದಾರೆ.

ಭಾರತದಿಂದ 80 ಸದಸ್ಯರ ಎನ್​ಡಿಆರ್​ಎಫ್​ ತಂಡದೊಂದಿಗೆ ಸಿ 130 ವಿಮಾನ ಕೂಡ ಮ್ಯಾನ್ಮಾರ್​ಗೆ ಶನಿವಾರ ಬಂದಿಳಿದಿದ್ದು, ಎನ್​ಡಿಆರ್​ಎಫ್​ ತಂಡವನ್ನು ಮ್ಯಾನ್ಮಾರ್​ ಮೋಫಾದಲ್ಲಿರುವ ಭಾರತೀಯ ರಾಯಭಾರಿ ಮೌಂಗ್​ ಮೌಂಗ್​ ಲಿನ್​ ಬರಮಾಡಿಕೊಂಡರು. ಭೂಕಂಪದ ನಂತರ ವಿಮಾನ ನಿಲ್ದಾಣಗಳು ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ, ರಕ್ಷಣಾ ಕಾರ್ಯಾಚರಣೆಗಾಗಿ ಎನ್​ಡಿಆರ್​ಎಫ್​ ಸಿಬ್ಬಂದಿ ಇಂದು ಮಂಡಲೆಗೆ ತೆರಳಿದೆ. ‘ಭೂಕಂಪದ ಬಳಿಕ ಮ್ಯಾನ್ಮಾರ್​ ರಾಜಧಾನಿಗೆ ರಕ್ಷಣಾ ಸಿಬ್ಬಂದಿಯನ್ನು ಕರೆತಂದ ಮೊದಲ ದೇಶ ಭಾರತ’ ಎಂದು ವಿದೇಶಾಂಗ ಸಚಿವಾಲಯದ ಹೇಳಿದೆ.

ಆಪರೇಷನ್​ ಬ್ರಹ್ಮದ ಭಾಗವಾಗಿ 60 ಪ್ಯಾರಾಫೀಲ್ಡ್​ ಆಂಬ್ಯುಲೆನ್ಸ್​ಗಳು ಮ್ಯಾನ್ಮಾರ್​ಗೆ ತೆರಳಲು ಸಿದ್ಧವಾಗುತ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಮಂಡಲೆಯಲ್ಲಿ ಭಾರತ ಫೀಲ್ಡ್​ ಆಸ್ಪತ್ರೆಯನ್ನು ಸ್ಥಾಪಿಸಲು ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ವೈದ್ಯರು ಸೇರಿದಂತೆ 118 ತಜ್ಞರ ತಂಡ ಶನಿವಾರ ಸಂಜೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

WhatsApp Group Join Now
Telegram Group Join Now
Share This Article
error: Content is protected !!