ನೈಪಿಡಾವ್ (ಮ್ಯಾನ್ಮಾರ್): ಶುಕ್ರವಾರ ಸಂಭವಿಸಿದ ಭೂಕಂಪನದಿಂದಾಗಿ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ತತ್ತರಿಸಿದೆ. ಭೂಕಂಪನದಿಮದಾಗಿ ಮ್ಯಾನ್ಮಾರ್ನಲ್ಲಿ ಈವರೆಗೆ ಮೃತರ ಸಂಖ್ಯೆ 700 ದಾಟಿದೆ. ಇನ್ನು 1600ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಶುಕ್ರವಾರ ಭೂಮಿ ಕಂಪಿಸುತ್ತಿದ್ದಂತೆ ಕಟ್ಟಡಗಳಿಂದ ಜನರು ಹೊರಗಡೆ ಓಡಿ ಬಂದಿದ್ದರು. ಬಳಿಕ ಆಶ್ರಯ ಪಡೆಯಲು ಪರದಾಡಿದರು. ಮ್ಯಾನ್ಮಾರ್‌ನ ಸರ್ಕಾರವು ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಭೂಕಂಪನದಿಂದ ಹಲವು ಕಟ್ಟಡಗಳು ನೆಲಸಮವಾಗಿವೆ. ಕೆಲವೆಡೆ ರಸ್ತೆಗಳು ಬಿರುಕುಬಿಟ್ಟ ಪರಿಣಾಮ ರಸ್ತೆ ಸಂಚಾರ ಮತ್ತು ಸಂಪರ್ಕ ಸ್ಥಗಿತಗೊಂಡಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.
ಶುಕ್ರವಾರ ಮಧ್ಯಾಹ್ನ 12.50ಕ್ಕೆ (ಸ್ಥಳೀಯ ಸಮಯ) ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬಳಿಕ 6.8 ತೀವ್ರತೆಯಲ್ಲಿ ಮತ್ತೊಮ್ಮೆ ಭೂಮಿ ನಡುಗಿರುವುದರಿಂದ ಭಾರೀ ಹಾನಿಯುಂಟಾಗಿದೆ. ಭೂಕಂಪದ ಕೇಂದ್ರಬಿಂದುವು ಸಗೈಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಭಾರತದಿಂದ ಆಪರೇಷನ್ : ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಮ್ಯಾನ್ಮಾರ್ಗೆ ಭಾರತ ಆಪರೇಷನ್ ಬ್ರಹ್ಮ ಹೆಸರಿನಲ್ಲಿ ನೆರವಿನ ಹಸ್ತ ಚಾಚಿದೆ. ಸಂತ್ರಸ್ತರಿಗಾಗಿ ಕಂಬಳಿಗಳು, ಬ್ಲಾಂಕೆಂಟ್ಸ್, ನೆಲಹಾಸಿಗೆ, ಆಹಾರದ ಪೊಟ್ಟಣಗಳು, ವೈದ್ಯಕೀಯ ಕಿಟ್, ಜನರೇಟ್ಗಳು ಸೇರಿದಂತೆ 15 ಟನ್ನಷ್ಟು ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್ಗೆ ಭಾರತ ಮೊದಲ ಹಂತದಲ್ಲಿ ಕಳುಹಿಸಿದೆ. ಈಗಾಗಲೇ ಪರಿಹಾರ ಸಾಮಗ್ರಿಗಳು ಯಂಗಾನ್ ತಲುಪಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಬಹುಮಹಡಿ ಕಟ್ಟಡಗಳು ನೆಲಸಮ: ಭೂಕಂಪನದ ತೀವ್ರತೆಗೆ ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಜೊತೆಗೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.