Ad imageAd image

ಸರ್ಕಾರಿ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ದಿಢೀರ್ ಭೇಟಿ : ವೈದ್ಯರ ಕಾರ್ಯವೈಖರಿಗೆ ಮೆಚ್ಚುಗೆ, ಮೂಲಸೌಕರ್ಯ ಸುಧಾರಣೆಗೆ ಸೂಚನೆ

Bharath Vaibhav
ಸರ್ಕಾರಿ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ದಿಢೀರ್ ಭೇಟಿ : ವೈದ್ಯರ ಕಾರ್ಯವೈಖರಿಗೆ ಮೆಚ್ಚುಗೆ, ಮೂಲಸೌಕರ್ಯ ಸುಧಾರಣೆಗೆ ಸೂಚನೆ
WhatsApp Group Join Now
Telegram Group Join Now

ಅಥಣಿ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರು ಮಂಗಳವಾರ ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ವ್ಯವಸ್ಥೆ ಹಾಗೂ ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
​ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಬಾಣಂತಿಯರು ಹಾಗೂ ಗರ್ಭಿಣಿಯರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಥಣಿ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 400 ಹೆರಿಗೆಗಳಾಗುತ್ತಿವೆ. ಇಲ್ಲಿ ಮೂವರು ಸ್ತ್ರೀರೋಗ ತಜ್ಞರು ಹಾಗೂ ಇಬ್ಬರು ಅರಿವಳಿಕೆ ತಜ್ಞರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ. ರೋಗಿಗಳು ಕೂಡ ವೈದ್ಯರ ಸೇವೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ,” ಎಂದು ಮೆಚ್ಚುಗೆ ಸೂಚಿಸಿದರು.

ಅಥಣಿ ವೈದ್ಯಾಧಿಕಾರಿಗೆ ಆಸ್ಪತ್ರೆಯಲ್ಲಿ ​ಮಾಹಿತಿ ಫಲಕಗಳ ಅಳವಡಿಕೆಗೆ ಸೂಚನೆ  ಆಸ್ಪತ್ರೆಗೆ ಬರುವ ಬಡ ಜನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ಸುಕನ್ಯಾ ಸಮೃದ್ಧಿ, ಎಬಿಎಆರ್‌ಕೆ ಹಾಗೂ ಜನನಿ ಶಿಶು ಸುರಕ್ಷಾ ಯೋಜನೆಗಳ ಬಗ್ಗೆ ಮಾಹಿತಿಯ ಕೊರತೆ ಇರುವುದನ್ನು ಗಮನಿಸಿದ ಅಧ್ಯಕ್ಷರು, ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಟಿವಿ ಪರದೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಿ ನಿರಂತರವಾಗಿ ಜಾಗೃತಿ ಮೂಡಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಔಷಧಿ ಕೊರತೆ ಬಗ್ಗೆ ಎಚ್ಚರಿಕೆ:
ಕೆಲವು ರೋಗಿಗಳಿಗೆ ಕೆಮ್ಮಿನ ಸಿರಪ್ ಹಾಗೂ ಮುಲಾಮುಗಳನ್ನು ಹೊರಗಡೆಯಿಂದ ತರುವಂತೆ ಚೀಟಿ ಬರೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆಸ್ಪತ್ರೆಯ ಆಡಳಿತ ಮಂಡಳಿಯು ಮುನ್ನೆಚ್ಚರಿಕೆ ವಹಿಸಿ ಕನಿಷ್ಠ 3 ತಿಂಗಳಿಗಾಗುವಷ್ಟು ಔಷಧಿಯನ್ನು ದಾಸ್ತಾನು ಇಟ್ಟುಕೊಳ್ಳಬೇಕು. ಬಡವರಿಗೆ ಯಾವುದೇ ಕಾರಣಕ್ಕೂ ಹೊರಗಡೆ ಔಷಧಿ ಖರೀದಿಸಲು ತಿಳಿಸಬಾರದು,” ಎಂದು ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ​ಭ್ರಷ್ಟಾಚಾರದ ಆರೋಪ ವಿಚಾರವಾಗಿ ಮಾತನಾಡಿ ಹೆರಿಗೆಗೆ ಹಣ ಪಡೆಯಲಾಗುತ್ತಿದೆ ಎಂಬ ಆರೋಪದ ಕುರಿತು ಉತ್ತರಿಸಿದ ನಾಗಲಕ್ಷ್ಮಿ ಚೌದರಿ, “ನಾನು ಖುದ್ದಾಗಿ ರೋಗಿಗಳನ್ನು ವಿಚಾರಿಸಿದ್ದೇನೆ, ಯಾರೂ ಲಂಚದ ಬಗ್ಗೆ ದೂರು ನೀಡಿಲ್ಲ. ಸೂಕ್ತ ಸಾಕ್ಷ್ಯಗಳಿಲ್ಲದೆ ಕರ್ತವ್ಯನಿರತ ವೈದ್ಯರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ವೈದ್ಯರ ಮನೋಬಲ ಕುಸಿಯುತ್ತದೆ,” ಎಂದರು.

​ಇದೇ ವೇಳೆ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಅಲ್ಲದೆ, ಧಾರವಾಡದಲ್ಲಿ ಜೈಲಿನಲ್ಲಿದ್ದುಕೊಂಡು ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳಲ್ಲಿ ಮೊಬೈಲ್ ಒದಗಿಸಿದ ಅಧಿಕಾರಿಗಳ ವಿರುದ್ಧ ಗೃಹ ಸಚಿವರಿಗೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ನಂತರ ಗಚ್ಚಿನಮಟ್ಟದ ಆವರಣದಲ್ಲಿ ಹಮ್ಮಿಕೊಂಡಿದ್ದ ಭರವಸೆಯ ಬೆಳಕು ಫೌಂಡೇಶನ್ ವತಿಯಿಂದ ಅಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರು ಸಾಲು ಸಾಲು ಸಮಸ್ಯೆಗಳನ್ನು ತೋಡಿಕೊಂಡರು, ಮಹಿಳಾ ಆಯೋಗದ ಅಧ್ಯಕ್ಷರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆಸಿ ಕೆಲವರಿಗೆ ಮಾರ್ಗದರ್ಶನ ನೀಡಿದರೆ ಇನ್ನೂ ಕೆಲವರನ್ನು ಕಾನೂನಿನ ಪಾಠವನ್ನು ಮಾಡಿದರು, ಶಾಸಕ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸಮಸ್ಯೆಗಳನ್ನು ತೋಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ವರದಿ : ಸುಕುಮಾರ ಮಾದರ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!