ಚಿಕ್ಕಬಳ್ಳಾಪುರ: ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಪಂಚಾಯತಿಯೊಂದರಲ್ಲಿ ಕಸ ಸಂಗ್ರಹಣೆಯ ವಾಹನ ಸ್ವಚ್ಛವಾಹಿನಿ ವಾಹನದ ಚಾಲಕಿ ನಂದಿನಿ. ಎರಡು ವರ್ಷಗಳ ಹಿಂದೆ ಪತಿ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಮುಂದೆ ಬದುಕು ಹೇಗೆ ಅನ್ನೋ ಚಿಂತೆ ಮಾಡುತ್ತ ಕೂರದೆ, ತನ್ನ ಎರಡು ಮಕ್ಕಳ ಮಕ್ಕಳ ಹಾಗೂ ತನ್ನ ಭವಿಷ್ಯಕ್ಕಾಗಿ ಪತಿ ಮಾಡುತ್ತಿದ್ದ ಚಾಲನಾ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ನಂದಾದೀಪ ಎಂಬ ಸ್ವಸಹಾಯ ಸಂಘದ ಸಹಾಯದಿಂದ ಚಾಲನಾ ತರಬೇತಿ ಪಡೆದು ಡಿಎಲ್ ಸಹ ಪಡೆದುಕೊಂಡಿದ್ದಾರೆ. ಪುರುಷ ಚಾಲಕರಿಗೆ ಕಡಿಮೆ ಇಲ್ಲದ ಹಾಗೆ ವಾಹನ ಚಾಲನೆ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
ಸ್ವಚ್ಛವಾಹಿನಿ ಸಾರಥಿಯಾಗಿರುವ ನಂದಿನಿ, ಗ್ರಾಮ ಪಂಚಾಯತಿ ವತಿಯಿಂದ ಪ್ರತಿ ತಿಂಗಳು 10 ಸಾವಿರ ಹಾಗೂ ಸಹಾಯಕಿಯಾಗಿರುವ ಗಂಗಮ್ಮರಿಗೆ 8000 ರೂಪಾಯಿ ಸಂಬಳ ನೀಡಲಾಗುತ್ತಿದೆ.
ಕಳೆದ ಆರು ತಿಂಗಳಿಂದ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಸ್ವಚ್ಚವಾಹಿನಿಯ ರಥಸಾರಥಿಯಾಗಿ ಕಾಯಕ ಮಾಡುತ್ತಿದ್ದಾರೆ. ಪ್ರತಿದಿನವೂ ಬೆಳಿಗ್ಗೆ 6 ಗಂಟೆಗೆ ಪಂಚಾಯತಿಗೆ ಆಗಮಿಸುವ ನಂದಿನಿ, ಸಹಾಯಕಿ ಗಂಗಮ್ಮ ಜೊತೆ ಸೇರಿ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಪ್ರತಿಯೊಂದು ಹಳ್ಳಿಗಳಿಗೂ ತೆರಳಿ ಕಸ ಸಂಗ್ರಹಣೆ ಮಾಡಿಕೊಂಡು ಬರುವ ಕಾಯಕ ಮಾಡುತ್ತಿದ್ದಾರೆ. ಇದರಿಂದ ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷ ಶಶಿ ಅವರು ನಂದಿನಿಯವರನ್ನು ಅಭಿನಂದಿಸಿದರು.




