ಬೆಳಗಾವಿ: ಇನ್ನೇನು ನವೆಂಬರ್ ಸಮೀಪಿಸುತ್ತಿದ್ದು, ಇಡೀ ರಾಜ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುವ ಸನಿಹದಲ್ಲಿದೆ.
ಈ ಮಧ್ಯೆ ಈ ಬಾರಿ ಕರ್ನಾಟಕ ರಾಜ್ಯೋತ್ಸವದ ವೇಳೆ ಕರಾಳ ದಿನ ಆಚರಿಸಲು ಎಂಇಎಸ್ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ‘ಕನ್ನಡ ದೀಕ್ಷೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಂಇಎಸ್ ಈಗ ಹಲ್ಲಿಲ್ಲದ ಹಾವು. ಅವರಿಗೆ ಕರಾಳ ದಿನ ಆಚರಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಅನುಮತಿ ನೀಡಬಾರದು, ಒಂದುವೇಳೆ ಅನುಮತಿ ನೀಡಿದ್ರೆ ಬೆಳಗಾವಿಯಲ್ಲಿ ರಣಾಂಗಣ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಕಾರ್ಯಕರ್ತರು ಜೈಲಿಗೆ ಹೋದರೂ ಪರವಾಗಿಲ್ಲ. ಕನ್ನಡ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಎಂಇಎಸ್ ಕರಾಳ ದಿನ ಆಚರಿಸಲು ನಮ್ಮ ಕಾರ್ಯಕರ್ತರು ಬಿಡಬಾರದು.
ಒಂದುವೇಳೆ ನಮ್ಮ ಕಾರ್ಯಕರ್ತರು ಜೈಲು ಪಾಲಾದರೆ ಅವರನ್ನು ಹೊರತರಲು ನಾನಿದ್ದೇನೆ. ಕನ್ನಡ ನೆಲದಲ್ಲಿ ವಾಸಿಸುವವರು ಕನ್ನಡ, ಕರ್ನಾಟಕಕ್ಕೆ ತಲೆಬಾಗಿ ಬದುಕಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ.




