ಮಂಡ್ಯ : ಡ್ರೋನ್ ಕ್ಯಾಮೆರಾಗಳನ್ನು ಇತ್ತೀಚೆಗೆ ದುಷ್ಟ ಕೃತ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದ್ದು, ಈ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ದೃಶ್ಯಗಳನ್ನು ಡೋನ್ ಬಳಸಿ ಸೆರೆ ಹಿಡಿದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮಂದಗೆರೆ ಸಮೀಪ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸ್ಥಳದಲ್ಲೇ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಡೋನ್ ಬಳಸಿ ಶೌಚ ದೃಶ್ಯವನ್ನು ಸೆರೆಹಿಡಿದವರು ಕಾರ್ ಮತ್ತು ಬೈಕ್ ಗಳಲ್ಲಿ ಪರಾರಿಯಾಗಿದ್ದು, ಕಿಡಿಗೇಡಿಗಳ ವಿಕೃತಿಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದ್ದು, ಸುತ್ತಲಿನ ವಿವಿಧ ಗ್ರಾಮಗಳ 100ಕ್ಕೂ ಅಧಿಕ ಮಹಿಳೆಯರು ಹೊಳೆತ್ತುವ ಕಾರ್ಯದಲ್ಲಿ ತೊಡಗಿದ್ದರು.
ಕಾಮಗಾರಿಯ ವೇಳೆ ಕೆಲವು ಮಹಿಳಾ ಕಾರ್ಮಿಕರು ಶೌಚಕ್ಕೆ ತೆರಳಿದಾಗ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆ ಏರಿ ಮೇಲೆ ನಿಂತು ಡೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.