ತುರುವೇಕೆರೆ: -ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕದ ನೂತನ ನಿರ್ದೇಶಕರಾಗಿ ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಲೆಕ್ಕ ಸಹಾಯಕ ಜಿ.ಎಸ್. ನರೇಂದ್ರ ಆಯ್ಕೆಯಾಗಿದ್ದಾರೆ.
ಪಟ್ಟಣದ ಸರ್ಕಾರಿ ಮಾದರಿ ಬಾಲಕರ ಪಾಠಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ತಾಲ್ಲೂಕು ಪಂಚಾಯ್ತಿಯ ಎರಡು ಸ್ಥಾನಗಳ ಪೈಕಿ ಗ್ರಾಮ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಎಸ್.ನರೇಂದ್ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪಂಚಾಯ್ತಿಯ ಎರಡು ಸ್ಥಾನಗಳ ಪೈಕಿ ಈಗಾಗಲೇ ಒಂದು ಸ್ಥಾನಕ್ಕೆ ಜಯರಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಒಂದು ಕ್ಷೇತ್ರ ಗ್ರಾಮ ಪಂಚಾಯಿತಿ ಕ್ಷೇತ್ರವಾಗಿದ್ದು 52 ಮಂದಿ ಮತದಾರರಿದ್ದರು. ಈ ಪೈಕಿ 50 ಮತಗಳು ಚಲಾವಣೆಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಲೆಕ್ಕ ಸಹಾಯಕ ಜಿ.ಎಸ್. ನರೇಂದ್ರ 29 ಮತಗಳನ್ನು ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ತಂಡಗ ಪಿಡಿಒ ಜ್ಯೋತಿ 13, ಹಡವನಹಳ್ಳಿ ಪಿಡಿಒ ಚಂದ್ರಶೇಖರ್ 08 ಮತ ಪಡೆದು ಪರಾಜಿತಗೊಂಡರು.
ಚುನಾವಣೆಯಲ್ಲಿ ಜಯಗಳಿಸಿದ ಜಿ.ಎಸ್.ನರೇಂದ್ರ ಅವರನ್ನು ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಶ್ರೀನಿವಾಸ್ ಕೃಷ್ಣಪ್ಪ, ಕುಮಾರಸ್ವಾಮಿ, ಗೋಪಿನಾಥ್, ನಿರಂಜನ್, ಸಿಬ್ಬಂದಿಗಳಾದ ಸುಭಾಷ್ ಚಂದ್ರ, ಹೇಮಂತ್ ಕುಮಾರ್, ಸುರೇಶ್, ಶೃತಿ, ಮಂಜುಳ, ಸಿದ್ದಾರೂಢ, ಶಂಕರಪ್ಪ, ಲೋಕೇಶ್ ಸೇರಿದಂತೆ ತಾಪಂ ಹಾಗೂ ಗ್ರಾಪಂ ನೌಕರರು, ಸಿಬ್ಬಂದಿಗಳು, ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




