ಸಿರುಗುಪ್ಪ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮವನ್ನು ಪ್ರಭಾರಿ ನ್ಯಾಯಾಧೀಶರಾದ ಈರಪ್ಪ ಡವಳೇಶ್ವರ್ ಅವರು ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿದ ಅವರು ರಾಷ್ಟ್ರೀಯ ಯುವ ದಿನಾಚರಣೆಯನ್ನು ಸ್ವಾಮಿ ವಿವೇಕನಾಂದರ ಜನ್ಮದಿನದ ಸವಿನೆನಪಿಗಾಗಿ ಸರ್ಕಾರದಿಂದ 1985 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತ ದೇಶದ ಪ್ರಗತಿಯು ಯುವ ಜನಾಂಗದ ಮೇಲೆ ಅವಲಂಬಿತವಾಗಿದ್ದು, ಆದ್ದರಿಂದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಯುವಕರಲ್ಲಿ ಮೂಡಿಸುವ ಉದ್ದೇಶವಾಗಿದ್ದು ನೀವೆಲ್ಲರೂ ಕಾನೂನು ಪಾಲನೆ ಮಾಡಬೇಕು.
ಕಡುಬಡವರು, ಕಾನೂನು ಹೋರಾಟ ಮಾಡುವಲ್ಲಿನ ನಿಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳ ಮೂಲಕ ನಿಮಗೆಲ್ಲಾ ಜಾಗೃತಿ ಮೂಡಿಸಲಾಗುತ್ತಿದೆಂದರು.
ಸರ್ಕಾರಿ ಸಹಾಯಕ ಅಭಿಯೋಜಕರಾದ ಶಿವರಾಜ್ ಅವರು ಮಾತನಾಡಿ ಬಲಿಷ್ಟ ಆಡಳಿತಕ್ಕಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಯುವಕರ ಕರ್ತವ್ಯವಾಗಿದೆ.
ಆದ್ದರಿಂದ ಎಲ್ಲಾ ಯುವಕ ಯುವತಿಯರು ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡುವುದು ಮತ್ತು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕೆಂದರು.
ಪ್ಯಾನಲ್ ವಕೀಲರಾದ ಮಲ್ಲಿಗೌಡ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಶಿಸ್ತು, ಸಂಯಮತೆ, ಪ್ರಜ್ಞೆಯನ್ನು ನಾವೆಲ್ಲಾ ತಿಳಿದುಕೊಂಡಾಗ ಮಾತ್ರ ರಾಷ್ಟ್ರೀಯ ಯುವ ದಿನಾಚರಣೆಗೆ ಮಹತ್ವ ದೊರೆತಂತಾಗುತ್ತದೆಂದು ತಿಳಿಸಿದರು.
ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಕಾರ್ಯದರ್ಶಿ ಶಿವಕುಮಾರ್.ಎಮ್, ಜಂಟಿ ಕಾರ್ಯದರ್ಶಿ ಮಂಜುಳಾ, ಪ್ಯಾನಲ್ ವಕೀಲರಾದ ಟಿ.ವೆಂಕಟೇಶ್‌ನಾಯ್ಕ್, ವಕೀಲರಾದ ಮಾರೆಣ್ಣ, ಗಂಗಾಧರ, ರುದ್ರಮುನಿ, ನೆಲಗುಂಟಯ್ಯ, ಪ್ರಾಂಶುಪಾಲರಾದ ನಾಗರಾಜ್.ಹೆಚ್ ಹಾಗೂ ಇನ್ನಿತರ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ