ರಾಯಚೂರು: ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಸೇರಿ ಕಾರ್ಮಿಕರ ವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾ ಬ್ಯಾಂಕ್ ನೌಕರರ ವಿವಿಧ ಸಂಘಟನೆ ಒಕ್ಕೂಟ ನಗರದ ಚಂದ್ರಮೌಳೇಶ್ವರ ವೃತ್ತದ ಕೆನರಾ ಬ್ಯಾಂಕ್ ಮುಂದೆ ರಾಷ್ಟ್ರವ್ಯಾಪ್ತಿ ಮುಷ್ಕರ ಅಂಗವಾಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ರೈತ ವಿರೋಧಿ,ರಾಷ್ಟ್ರ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಖಾಸಗಿ ಬಂಡವಾಳಶಾಹಿಗಳ ಹಿತಕ್ಕಾಗಿ ಈ ದೇಶದ ರೈತ ಕಾರ್ಮಿಕರ ಹಿತವನ್ನು ಬಲಿಕೊಡಲಾಗುತ್ತಿದೆ. ಬಂಡವಾಳಶಾಹಿಗಳ ಪೋಷಣೆ, ರೈತ ಕಾರ್ಮಿಕರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಇಂದು ದೇಶದಾದ್ಯಂತ 20 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತ ಕಾರ್ಮಿಕರು ಬೀದಿಗಿಳಿದು ಮುಷ್ಕರ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಇದು ಕೇವಲ ಮುಷ್ಕರವಲ್ಲ. ಇದು ರೈತ ಕಾರ್ಮಿಕ ಸಮುದಾಯದ ಆಕ್ರೋಶಭರಿತ ಮುಷ್ಕರ ಎಂದು ಹೋರಾಟಗಾರರು ತಿಳಿಸಿದ್ದಾರೆ.
1969 ಜುಲೈ 19 ರ ನಂತರದ ದಿನಗಳಲ್ಲಿ ದೇಶದ ರಾಷ್ಟ್ರೀಕೃತ ಬ್ಯಾಂಕಿಂಗ ವ್ಯವಸ್ಥೆಯು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಪ್ರತೀ ವರ್ಷವೂ ಸಾವಿರಾರು ಕೋಟಿ ರೂಪಾಯಿಗಳ ಲಾಭಾಂಶವನ್ನು ಕೇಂದ್ರ ಸರಕಾರಕ್ಕೆ ನೀಡಲಾಗುತ್ತಿದೆ. ಆದರೂ ಸದೃಢವಾಗಿ ಬೆಳೆದಿರುವ ಈ ವ್ಯವಸ್ಥೆಯನ್ನು ಕೇಂದ್ರ ಸರಕಾರವು ಖಾಸಗೀಕರಣ ನೀತಿಯ ಮೂಲಕ ದುರ್ಬಲಗೊಳಿಸಲು ಯತ್ನಿಸುತ್ತಿದೆ. ಇದನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು, ಎಲ್ಲ ಹಂತಗಳಲ್ಲಿ ಖಾಲಿಯಿರುವ 2 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ಬ್ಯಾಂಕ್ ನೌಕರರಿಗೆ ಹೆಳೆಯ ಪಿಂಚಣಿ ಸೌಲಭ್ಯ ಮರು ಜಾರಿಗೊಳಿಸಬೇಕು, ಜೀವ ಹಾಗೂ ಸಾಮಾನ್ಯ ವಿಮಾ ಕಂಪೆನಿಗಳನ್ನು ಖಾಸಗೀಕರಣಗೊಳಿಸದೇ ಬಲವರ್ಧನೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಕುಮಾರ, ಸಲಾವುದ್ದೀನ್, ಗಣೇಶ, ಸಚಿನ್,ವಸಂತ ಮಾಧವ, ರೂಪ ಲಕ್ಷ್ಮಿ, ಶ್ರುತಿ,ರವಿ ಕುಮಾರ ಆದೋನಿ, ಆಯುಬ್ ಖಾನ್ ಸೇರಿದಂತೆ ಬ್ಯಾಂಕ್ ನೌಕರರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನ ಗೌಡ




