ಉಡುಪಿ: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹದಳ ನಡೆಸಿದ ಎನ್ಕೌಂಟರ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ಪ್ರೀತಂ ಗೌಡ ಮೃತಪಟ್ಟಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಎಎನ್‌ಎಫ್ ಮತ್ತು ನಕ್ಸಲರ ತಂಡಗಳು ಮುಖಾಮುಖಿಯಾಗಿದ್ದು, ಈ ವೇಳೆ ನೇತ್ರಾವತಿ ದಳದ ನಕ್ಸಲ್ ನಾಯಕ ವಿಕ್ರಂ ಗೌಡರ ಎನ್ ಕೌಂಟರ್ ಮಾಡಲಾಗಿದೆ.
ಹೆಬ್ರಿ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಹಿನ್ನಲೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದ ಎಎನ್‌ಎಫ್ ತಂಡಕ್ಕೆ ನಕ್ಸಲರ ತಂಡ ಮುಖಾಮುಖಿಯಾಗಿದೆ. ಈ ವೇಳೆ ನಕ್ಸಲ್ ಮುಖಂಡನ ಮೇಲೆ ಎಎನ್‌ಎಫ್ ಪೊಲೀಸರು ಫೈರಿಂಗ್ ಮಾಡಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ.
ಫೈರಿಂಗ್ ನಲ್ಲಿ ಕಬ್ಬಿನಾಲೆ ಮೂಲದ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದ್ದು, ಫೈರಿಂಗ್ ವೇಳೆ ಪರಾರಿಯಾದ ಮೂವರು ನಕ್ಸಲರಿಗಾಗಿ ಶೋಧ ಮುಂದುವರಿಸಲಾಗಿದೆ.
ಚಿಕ್ಕಮಗಳೂರು -ಉಡುಪಿ ಗಡಿ ಭಾಗದಲ್ಲಿ ಇತ್ತೀಚೆಗಷ್ಟೇ ನಕ್ಸಲರ ಚಲನವಲನ ಕಾಣಿಸಿಕೊಂಡಿದ್ದು, ಕೂಂಬಿಂಗ್ ಕಾರ್ಯಾಚರಣೆಯನ್ನು ಪೊಲೀಸರು ಹಾಗೂ ಎಎನ್‌ಎಫ್ ತಂಡ ತೀವ್ರಗೊಳಿಸಿತ್ತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್‌ಆರ್ ಪುರ ಹಾಗೂ ಉಡುಪಿ, ಕಾರ್ಕಳ ಭಾಗದಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡ, ಕೇರಳ, ಕೊಡಗು ಭಾಗದಲ್ಲಿಯೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಇತ್ತೀಚೆಗೆ ಚಿಕ್ಕಮಗಳೂರು ಭಾಗದಲ್ಲಿ ಮುಂಡಗಾರು ಲತಾ ನೇತೃತ್ವದ ನಕ್ಸಲರ ತಂಡ ಓಡಾಡಿದ ಬಗ್ಗೆ ಮಾಹಿತಿ ಗೊತ್ತಾಗಿತ್ತು. ಹೀಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.