ಹುಬ್ಬಳ್ಳಿ: ಎನ್’ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರ ಕಿಚಡಿ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ವಿಪ ಸದಸ್ಯ ಸಲೀಂ ಅಹ್ಮದ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಒಂದು ಕಡೆಗೆ ಚಂದ್ರಬಾಬು ನಾಯ್ಡು, ಮತ್ತೊಂದು ಕಡೆಗೆ ನಿತೀಶ್ ಕುಮಾರ ಅವರ ಸಹಕಾರದಿಂದ ಸರ್ಕಾರ ನಡೆಯುತ್ತಿದೆ. ಈ ಸರ್ಕಾರದಿಂದ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಸಂಚಲನ ಉಂಟುಮಾಡಿದೆ. ಜನರು ನಮಗೆ ಆರ್ಶೀವಾದ ಮಾಡಿದ್ದಾರೆ ಎಂದಿದ್ದಾರೆ.
ಸದ್ಯ ಲೋಕಸಭಾ ಚುನಾವಣೆ ಮುಗದಿದೆ. ಹೀಗಾಗಿ ರಾಜ್ಯದಲ್ಲಿ ಮೂರು ಉಪಚುನಾವಣೆಗಳು ನಡೆಯಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಸಿದ್ದತೆ ನಡೆಸಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇದರ ಜೊತೆಗೆ ಬರುವ ಜಿಪಂ, ತಾಪಂ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಸಿದ್ದತೆ ಕೈಗೊಂಡಿದೆ ಎಂದರು.
ಗ್ಯಾರಂಟಿ ನಿಲ್ಲಿಸಲು ಬಿಜೆಪಿ ಹೋರಾಟ: ಬಿಜೆಪಿಯವರು ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದನ್ನು ಖಂಡಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಈ ಹಿಂದೆ ದಿನನಿತ್ಯದ ಬೆಲೆ ಏರಿಕೆ ಆದಾಗ ಒಂದು ಪ್ರತಿಭಟನೆ ಮಾಡಲಿಲ್ಲ. ಇವರ ಹೋರಾಟ ಜನರ ಪರವಾಗಲ್ಲ, ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಎಂದರು.
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಗ್ಯಾರಂಟಿಗಳು ನಮ್ಮ ಸರ್ಕಾರದ ಬದ್ದತೆ, ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದರು.
ವರದಿ: ಸುಧೀರ್ ಕುಲಕರ್ಣಿ