ಮೈಸೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದಾಗಲಿ ಅಥವಾ ನನ್ನದಾಗಲಿ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಮೈಸೂರಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಮಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ.ಅವರು ಕಾನೂನು ರೀತಿಯಲ್ಲಿ ತನಿಖೆ ಮಾಡಿ ವರದಿ ನೀಡಲಿದ್ದಾರೆ. ಹಿಂದೆ ಎಲ್ಲ ಸಿಬಿಐಗೆ ಕೊಟ್ಟಿದ್ದೇವೆ. ಬಿಜೆಪಿಯವರು ಯಾವತ್ತೂ ಒಂದೇ ಒಂದು ಕೇಸ್ ಸಿಬಿಐಗೆ ನೀಡಿರಲಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ. ಎಸ್‌ಐಟಿಯವರು ತನಿಖೆ ಮಾಡ್ತಿದ್ದಾರೆ. ನನಗೆ ನಂಬಿಕೆಯಿದೆ ಅವರು ಸರಿಯಾದ ದಾರಿಯಲ್ಲಿ ಮಾಡ್ತಾರೆ ಅಂತ. ನಾನು ಯಾವತ್ತೂ ಕೂಡ ಪೊಲೀಸರಿಗೆ ಕಾನೂನು ಬಿಟ್ಟು ಮಾಡಿ ಅಂತ ಹೇಳಿಲ್ಲ. ಕಾನೂನು ವಿರುದ್ಧವಾಗಿ ಮಾಡಿ ಅಂತನೂ ಹೇಳಿಲ್ಲ. ಕಾನೂನು ರೀತಿಯಲ್ಲೇ ಮಾಡ್ತಿದ್ದಾರೆ ಎಂದರು.
ಸಿಬಿಐ ತನಿಖೆಗೆ ವಹಿಸಲಿ ಅಂತ ಪೆನ್ ಡ್ರೈವ್ ಗಳನ್ನು ಆಸ್ಟ್ರೇಲಿಯಾದಲ್ಲಿ ಅಪ್ ಲೋಡ್ ಮಾಡಲಾಗಿದೆ ಅಂತ ಹೇಳ್ತಿದ್ದಾರೆ. ನಮ್ಮ ಪೊಲೀಸರ ಬಗ್ಗೆ ನಮಗೆ ನಂಬಿಕೆಯಿದೆ. ನಾವು ಡಿಕೆ ರವಿ ಕೇಸ್ ಸಿಬಿಐ ಕೊಟ್ಟಿದ್ವಿ, ಜಾರ್ಜ್ ಕೇಸ್ ಕೊಟ್ಟಿದ್ವಿ. ಪರೇಸ್ ಮೆಸ್ತಾ ಪ್ರಕರಣ ನೀಡಿದ್ವಿ. ಒಂದರಲ್ಲಿ ಆದ್ರೂ ಶಿಕ್ಷೆ ಆಯ್ತಾ? ಎಂದು ಪ್ರಶ್ನಿಸಿದರು.
ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರ ಇನ್ವಾಲ್ಮೆಂಟ್ ಇಲ್ಲ. ನನ್ನ ಇನ್ವಾಲ್ಮೆಂಟ್ ಇಲ್ಲ. ಡಿಕೆ ಶಿವಕುಮಾರ್ ಇನ್ವಾಲ್ಮೆಂಟ್ ಇಲ್ಲ. ಬಿಜೆಪಿಯವರು ಮಾಡುತ್ತಿರೋ ಆರೋಪ ಎಲ್ಲ ಸುಳ್ಳು ಎಂಬುದಾಗಿ ಸ್ಪಷ್ಟ ಪಡಿಸಿದರು.