ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಂಗರ ಕಾಲಕ್ಕೆ ಸೇರಿವೆ ಎನ್ನಲಾದ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯಲ್ಲಿ ಈ ನಾಣ್ಯಗಳು ದೊರೆತಿದ್ದು, ಇದೀಗ ತಾಲೂಕಿನಲ್ಲಿ ಕುತೂಹಲ ಮೂಡಿಸಿದೆ.
ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯೊಂದು ಸಿಕ್ಕಿದ್ದು, ಪರಿಶೀಲಿಸಿದಾಗ ಅದರೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಒಟ್ಟು 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ನಾಣ್ಯಗಳು ಸಿಕ್ಕ ಕೂಡಲೇ ಕೂಲಿ ಕಾರ್ಮಿಕರು ಅವುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾಂಚಿಗೆ ಒಪ್ಪಿಸಿದ್ದಾರೆ.
ಪತ್ತೆಯಾಗಿರುವ ಚಿನ್ನದ ನಾಣ್ಯಗಳ ಮೇಲ್ಭಾಗದಲ್ಲಿ ಆನೆಯ ಚಿತ್ರ ಇರುವುದಾಗಿ ತಿಳಿದುಬಂದಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಪತ್ತೆಯಾಗಿರುವ ನಾಣ್ಯಗಳು ಗಂಗರ ಕಾಲಕ್ಕೆ ಸಂಬಂಧಿಸಿದ್ದಾಗಿರಬಹುದು ಎಂಬ ಕುತೂಹಲ ಮೂಡಿದೆ.


