ಕಮಲಾಪುರದ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಲಕ್ಷ್ಮೀ ಕರಿಯಪ್ಪನವರ ಹಾಗೂ ತನ್ವೀರ್ ದೊಡಮನಿ ಎಂಬ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಸಮಯದಲ್ಲಿ ಶಾಲೆಯಿಂದ ಹೊರಬಂದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳನ್ನು ಪುಸಲಾಯಿಸಿ ತನ್ನ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದನು. ಈ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯಿಂದ ಕಮಲಾಪುರ ಭಾಗದಲ್ಲಿ ತೀವ್ರ ಆತಂಕ ಮೂಡಿತ್ತು.

ಮಕ್ಕಳನ್ನು ಅಪಹರಿಸಿ ಜೊಯಿಡಾ ಮಾರ್ಗವಾಗಿ ಕರೆದೊಯ್ಯುತ್ತಿದ್ದಾಗ, ಆರೋಪಿಯ ಬೈಕ್ ಜೋಯಿಡಾ ಬಳಿಯ ನಾಗೋಡಾ ಕ್ರಾಸ್ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಇದರಿಂದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಓಡಿ ಬಂದು ಮಕ್ಕಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳು ತಾವು ಧಾರವಾಡದವರೆಂದು ತಿಳಿಸಿದ್ದಾರೆ. ಅನುಮಾನಗೊಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜೊಯಿಡಾ ಪೊಲೀಸರು ಮಕ್ಕಳನ್ನು ಸುಪರ್ದಿಗೆ ಪಡೆದಿದ್ದಾರೆ . ಆರೋಪಿ ಸವಾರನನ್ನು ಬಂಧಿಸಲಾಗಿದೆ. ಆತನ ವಿಚಾರಣೆ ನಡೆಸಲಾಗುತ್ತಿದೆ. ಮಕ್ಕಳನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

