ನವದೆಹಲಿ : ಮುಡಾ ಪ್ರಕರಣದಲ್ಲಿ ಸಿಲುಕಿ ತಲೆಬಿಸಿ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಒಂದೆಡೆ ಇದ್ದರೆ, ಇತ್ತ ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಕೂಗು, ಮುಂದಿನ ಸಿಎಂ ಇವರೇ, ಅವರೇ ಎಂಬ ಆಂತರಿಕೆ ಪ್ರಹಸನ, ಬಣ ಬಡಿದಾಟ ಮತ್ತೆ ಮುನ್ನೆಲೆಗೆ ಬಂದಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತ ಮಾಗಡಿ ಶಾಸಕ ಬಾಲಕೃಷ್ಣ ಅವರು, ಮುಂದೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಡಿಕೆಶಿ ಅವರು ಮುಂದಿನ ಸಿಎಂ ಎಂಬಂತಹ ಮಾತುಗಳನ್ನಾಡಿದ್ದಾರೆ. ಇತ್ತ ನಾವೇನೂ ಕಮ್ಮಿ ಎಂಬಂತೆ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಮುಂದಿನ ಸಿಎಂ ನಮ್ಮ ಸತೀಶ್ ಅಣ್ಣ ಎಂದು ಪೋಟೋ ಪ್ರದರ್ಶಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಮುಂದಿನ ಸಿಎಂ ಸತೀಶಣ್ಣ ಎಂದು ಭಾವಚಿತ್ರವೊಂದನ್ನು ಪ್ರದರ್ಶನ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ರಾಜ್ಯ ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್ ಆಂತರಿಕದಲ್ಲಿ ಬಣ ಬಡಿದಾಟ ಬಿರುಸುಗೊಂಡಂತಿದೆ.




