ಬೆಂಗಳೂರು : ರಾಜಕಾರಣಿಗಳು ಜನಸೇವೆ ಮಾಡ್ತಾರೋ ಬಿಡ್ತಾರೋ.. ಸಿಕ್ಕಾಪಟ್ಟೆ ದುಡ್ಡಂತೂ ಮಾಡ್ತಾರೆ.. ಇದು ಜನಸಾಮಾನ್ಯರ ಬಾಯಲ್ಲಿ ಸದಾ ಕೇಳಿ ಬರೋ ಮಾತು . ಇದಕ್ಕೆ ತಕ್ಕಂತೆ ನಮ್ಮ ಜನಪ್ರತಿನಿಧಿಗಳೂ ಕೂಡಾ ತಮ್ಮ ಸಂಪತ್ತನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಇದೀಗ ದೇಶದ ಶ್ರೀಮಂತ ಶಾಸಕರ ಪಟ್ಟಿ ಹೊರಬಿದ್ದಿದೆ.ಕರ್ನಾಟಕದ ನಾಲ್ಕು ಮಂದಿ ಶಾಸಕರು ಟಾಪ್ 10 ಸ್ಥಾನದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ದೇಶದ ಎಲ್ಲಾ ರಾಜ್ಯಗಳ ಶಾಸಕರ ಸಂಪತ್ತಿನ ಕುರಿತ ವರದಿಯೊಂದು ಬಿಡುಗಡೆಯಾಗಿದ್ದು, ಮುಂಬೈನ ಘಾಸ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3383 ಕೋಟಿ ರು. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 1413 ಕೋಟಿ ರು. ಅಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ವಿಶೇಷವೆಂದರೆ ಟಾಪ್ 10 ಶ್ರೀಮಂತರಲ್ಲಿ ಕರ್ನಾಟಕದ ನಾಲ್ವರು ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ನ ಪ್ರಿಯಾಕೃಷ್ಣ 1156 ಕೋಟಿ ರು.ನೊಂದಿಗೆ 4ನೇ ಸ್ಥಾನದಲ್ಲಿ ಮತ್ತು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್‌ನ ಬೈರತಿ ಸುರೇಶ್ 648 ಕೋಟಿ ರು.ನೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.
100 ಕೋಟಿ ರು.ಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ ಅತಿ ಹೆಚ್ಚು ಶಾಸಕರು ಕರ್ನಾಟಕದಲ್ಲಿ ಇದ್ದಾರೆ. ಕರ್ನಾಟಕದ 31 ಶಾಸಕರ ಆಸ್ತಿ 100 ಕೋಟಿ ರು. ಗಿಂತಲೂ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ , ಮಹಾರಾಷ್ಟ್ರದ ಎಂಎಲ್‌ಎ ಗಳಿದ್ದಾರೆ.
ಇನ್ನು ಪಶ್ಚಿಮ ಬಂಗಾಳ ರಾಜ್ಯದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರು ಅತ್ಯಂತ ಬಡ ಶಾಸಕರಾಗಿದ್ದಾರೆ. ಇವರ ಒಟ್ಟು ಆಸ್ತಿ ಕೇವಲ 1,700 ರು. ರಷ್ಟಿದೆ.
ದೇಶದ 4092 ಶಾಸಕರ ಪೈಕಿ ಶೇ. 45ರಷ್ಟು ಕ್ರಿಮಿನಲ್ಸ್, ಶೇ.29ರಷ್ಟು ಗಂಭೀರ ಪ್ರಕರಣ ದಾಖಲಾಗಿದೆ ಎಂದು ವರದಿ ಹೇಳಿದೆ. ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ 28 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು 4092 ಶಾಸಕರ ಆಸ್ತಿ ಅಧ್ಯಯನದ ಮಾಡಿ ಈ ವರದಿ ಬಿಡುಗಡೆ ಮಾಡಿದೆ.