ಪಾವಗಡ : ಗ್ರಾಮ ಪಂಚಾಯತಿಯಲ್ಲಿ ಕಳೆದ 8 ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಕೆಲವು ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಸಿ ಕೆ ಪುರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆರೋಪಿಸಿದರು.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಸಿಕೆಪುರ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೊತ್ತೂರು ಕೊಂಡಪ್ಪನವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಪಂಚಾಯಿತಿಯ ಅಧ್ಯಕ್ಷರಾಗಿ ಶ್ರೀಮತಿ ಅರುಂಧತಿ ನಾಗಲಿಂಗಪ್ಪನವರು ಅಧಿಕಾರ ವಹಿಸಿಕೊಂಡ ನಂತರ ಇವರ ಗಂಡನಾದ ನಾಗಲಿಂಗಪ್ಪನವರ ನಿರ್ದೇಶನದಂತೆ ಪಂಚಾಯಿತಿಯ ಕೆಲಸಗಳು ನಡೆಯುತ್ತಿವೆ. ಸರ್ಕಾರವು ಮನೆ ಇಲ್ಲದ ನಿರ್ಗತಿಕರಿಗೆ 52 ಮನೆಗಳನ್ನು ನೀಡಿದ್ದು ,ಗ್ರಾಮ ಸಭೆಯನ್ನು ಕರೆದು ಯೋಗ್ಯ ಫಲಾನುಭವಿಗಳನ್ನು ಗುರಿತಿಸಲು ಸಹ ಮೀನಾ ಮೇಷ ಎಣಿಸುತ್ತಿದ್ದಾರೆ. ಎಸ್ ಸಿ ಎಸ್ ಟಿ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕರಿಗೂ ಸಹ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಇವರು ನೀಡುವ ಚೆಕ್ ಗಳಿಗೆ ಅಧ್ಯಕ್ಷರು ಸಹಿ ಹಾಕುತ್ತಿಲ್ಲ ಕೇಳಿದರೆ ಗ್ರಾಮ ಸಭೆಯಲ್ಲಿ ಇಡಬೇಕೆಂದು ತಿಳಿಸುತ್ತಾರೆ. ಆದರೆ
ಮೋಟಾರ್ ಮೆಕಾನಿಕ್ ಏಜೆನ್ಸಿ ಎಂಬ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಯಾವುದೇ ರೀತಿಯ ಜಿಎಸ್‌ಟಿಯನ್ನು ಸಹ ಪಾವತಿಸದೇ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯ ನಿಯಮದ ಪ್ರಕಾರ ಸದಸ್ಯರ ಖಾತೆ ಗಾಗಲಿ ಇಲ್ಲವೇ ತಮ್ಮ ಕುಟುಂಬದವರ ಖಾತೆಗೆ ಹಣ ವರ್ಗಾಯಿಸುವಂತಿಲ್ಲ ಎಂಬ ನಿಯಮವನ್ನು ಗಾಳಿಗೆ ತೂರಿ ತಮ್ಮ ಗಂಡನಾದ ನಾಗಲಿಂಗಪ್ಪನವರ ಹೆಸರಿಗೆ ಲಕ್ಷಾಂತರ ರೂಪಾಯಿ ವರ್ಗಸಿದ್ದಾರೆ. ಈ ವಿಚಾರವಾಗಿ ನಾನು ಲೋಕಾಯುಕ್ತರಿಗೂ ಸಹ ದೂರನ್ನು ನೀಡುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಗಿರೀಶ್ ರವರು ಮಾತನಾಡುತ್ತಾ, ನಮ್ಮ ಗ್ರಾಮ ಪಂಚಾಯತಿಯಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತಿವೆ. ಪ್ರತಿ ತಿಂಗಳಿಗೆ ಒಂದು ಸಾಮಾನಸಭೆಯನ್ನು ಹಾಗೂ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಯನ್ನು ಕರೆಯಬೇಕೆನ್ನುವ ಗ್ರಾಮ ಪಂಚಾಯಿತಿ ನಿಯಮವಿದೆ ಆದರೆ ಇಲ್ಲಿಯವರೆಗೂ ಯಾವುದೇ ಸಭೆ ಮಾಡದೆ ಇರುವುದು ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ತಿಳಿಸಿದರು.
ವರದಿ:ಶಿವಾನಂದ




