ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಹಾಗೂ ವೈವಾಹಿಕ ಅತ್ಯಾಚಾರದ ವಿಷಯವು ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ಅಪರಾಧೀಕರಣ ಗೊಳಿಸಿದರೆ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದೆ.
ವೈವಾಹಿಕ ಅತ್ಯಾಚಾರ ಅಪರಾಧವೇ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈ ಬಗ್ಗೆ ಕೋರ್ಟಿಗೆ ಸರ್ಕಾರ ತನ್ನ ಅಭಿಪ್ರಾಯವನ್ನು ಅಫಿಡವಿಟ್ ಮುಖಾಂತರಸಲ್ಲಿಸಿದೆ. ಗಂಡನು ಹೆಂಡತಿಯ ಸಮ್ಮತಿ ಪಡೆದೇ ಸಂಬಂಧ ಬೆಳೆಸಬೇಕು ನಿಜ.
ಇದನ್ನು ಉಲ್ಲಂಘಿಸುವ ಮೂಲಭೂತ ಹಕ್ಕು ಆತನಿಗಿಲ್ಲ. ಆದಾಗ್ಯೂ ಒಂದುವೇಳೆ ಗಂಡನು ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯನ್ನೂ ಅಪರಾಧ ವ್ಯಾಪ್ತಿಗೆ ತಂದರೆ ವೈವಾಹಿಕ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಇದು ಕೋರ್ಟ್ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ. ಎಲ್ಲಪಾಲುದಾರರೊಂದಿಗೆ, ಹಾಗೂ ರಾಜ್ಯಗಳ ಜತೆ ಸರಿಯಾದ ಸಮಾಲೋಚನೆ ಮಾಡದೇ ವೈವಾಹಿಕ ಅತ್ಯಾಚಾರ ನಿರ್ಧರಿಸಲು ಆಗದು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.