ಬಲರಾಂಪುರ, ಉತ್ತರ ಪ್ರದೇಶ: ಜಿಲ್ಲೆಯ ರಾಮಾನುಜಗಂಜ್ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ವಿಪರೀತವಾಗಿ ಹೆಚ್ಚಳವಾಗಿದೆ. ಆನೆ ದಾಳಿಗೆ 24 ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಆನೆ ಮಹಿಳೆಯನ್ನು ತುಳಿದು ಕೊಂದು ಹಾಕಿತ್ತು. ಇನ್ನು ವೃದ್ಧರೊಬ್ಬರು ಸಹ ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ: ರಾಮಾನುಜಗಂಜ್ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫುಲ್ವಾರ್ ಗ್ರಾಮದ ಹೊಲದಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದ ದಂಪತಿ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ. ಪತಿಯನ್ನು ರಕ್ಷಿಸಲು ಪತ್ನಿ ಮುಂದೆ ಬಂದಿದ್ದಾರೆ. ಈ ವೇಳೆ ಮುಂದೆ ಬಂದ ಅವರನ್ನೇ ಆನೆ ತುಳಿದು ಸಾಯಿಸಿದೆ.
ಆನೆಯಿಂದ ನಜ್ಜುಗುಜ್ಜಾದ ವೃದ್ಧ: ಜಿಗ್ಡಿ ಬಾಸೆನ್‌ನ ನಿವಾಸಿ ದುರ್ಗಾ ಪ್ರಸಾದ್ ಸಿಂಗ್ ಅವರು ಸೋಮವಾರ ರಾತ್ರಿ ಮಹಾವೀರ್‌ಗಂಜ್‌ನಿಂದ ಹಿಂತಿರುಗುತ್ತಿದ್ದರು. ಆಗ ಇದ್ದಕ್ಕಿದ್ದಂತೆ ರಾಂಪುರದ ಸಿಂಧೂರ್ ನದಿಯ ದಡದಲ್ಲಿರುವ ಕಾಡಿನ ಮಧ್ಯದ ಹೊಲದಲ್ಲಿದ್ದ ಆನೆ ದಾಳಿ ಮಾಡಿದೆ. ಘಟನೆಯಲ್ಲಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಗಳಿಗೆ ಅರಣ್ಯ ಇಲಾಖೆ ತಕ್ಷಣ ಆರ್ಥಿಕ ನೆರವು ನೀಡಿದೆ. ಆನೆ ಪೀಡಿತ ಪ್ರದೇಶಗಳಲ್ಲಿ ಓಡಾಡದಂತೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜನರಿಗೆ ಸಲಹೆ ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅನಾವಶ್ಯಕವಾಗಿ ಕಾಡಿನ ಕಡೆಗೆ ಹೋಗಬೇಡಿ ಎಂದು ಮನವಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.