ನವದೆಹಲಿ : ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪೇ ನಮ್ಮನ್ನು ಸಿಕ್ಕಿಹಾಕಿಸುತ್ತದೆ. ದೆಹಲಿಯ ಉದ್ಯಮಿಯೊಬ್ಬ ಬಹಳ ಪ್ಲಾನ್ ಮಾಡಿ ತನ್ನ ಹೆಂಡತಿಯನ್ನು ಕೊಂದಿದ್ದ. ಯಾರಿಗೂ ಗೊತ್ತಾಗಬಾರದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೂಡ ತೆಗೆದುಕೊಂಡಿದ್ದ. ಎಲ್ಲವೂ ಆತನ ಪ್ಲಾನ್ ಪ್ರಕಾರವೇ ಆಗಿತ್ತು. ತಾನು ಸಿಕ್ಕಿಬೀಳುವುದಿಲ್ಲ ಎಂಬ ಹುಂಬ ಧೈರ್ಯದಲ್ಲಿದ್ದ ಆತ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಆತನ ಹೆಂಡತಿಯ ಮೂಗುತಿಯಿಂದಾಗಿ ಆತ ಕೊಲೆ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಘಟನೆ ವಿವರ: ದೆಹಲಿಯ ಉದ್ಯಮಿಯಾದ ಅನಿಲ್ ಕುಮಾರ್ ತನ್ನ ಪತ್ನಿಯ ಕುಟುಂಬಕ್ಕೆ ತಾನು ಯಾರೊಂದಿಗೂ ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಲೇ ಇದ್ದ. ಸುಮಾರು ಒಂದು ತಿಂಗಳ ಹಿಂದೆಯೇ ಆತ ತನ್ನ ಹೆಂಡತಿಯನ್ನು ಕೊಂದಿದ್ದ. ತಮ್ಮ ಮಗಳೆಲ್ಲಿ ಎಂದು ಆಕೆಯ ಪೋಷಕರು ಕೇಳಿದಾಗ ಮಾತು ಮರೆಸುತ್ತಿದ್ದ. ಇದರಿಂದ ಅವರಿಗೆ ಅನುಮಾನ ಮೂಡಿತ್ತು. ಪೊಲೀಸರು ಅವರನ್ನು ಸಂಪರ್ಕಿಸಿ ನಿಮ್ಮ ಮಗಳ ಶವ ಪತ್ತೆಯಾಗಿದೆ ಎಂದು ಹೇಳುವವರೆಗೂ ಆ ಕುಟುಂಬಕ್ಕೆ ತಮ್ಮ ಮಗಳು ಬದುಕಿಲ್ಲವೆಂಬ ವಿಷಯವೇ ಗೊತ್ತಿರಲಿಲ್ಲ. ಏಪ್ರಿಲ್ 1ರಂದು ಆ ಮಹಿಳೆಯ ಶವವನ್ನು ಆಕೆಯ ಕುಟುಂಬ ಗುರುತಿಸಿದೆ.
ಸೀಮಾ ಸಿಂಗ್ ಎಂಬ ಮಹಿಳೆ ದೆಹಲಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ಕುಮಾರ್ ಅವರೊಂದಿಗೆ 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆಕೆಯ ಶವ ಮಾರ್ಚ್ 15ರಂದು ದೆಹಲಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ಆಕೆಯ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕಲ್ಲು ಮತ್ತು ಸಿಮೆಂಟ್ ಚೀಲಕ್ಕೆ ಕಟ್ಟಲಾಗಿತ್ತು. ಆಕೆಯ ಕೊಳೆತ ಶವ ಪತ್ತೆಯಾದ ನಂತರ, ಪೊಲೀಸರು ತನಿಖೆ ಆರಂಭಿಸಿದರು. ಅದು ಅವರನ್ನು ದಕ್ಷಿಣ ದೆಹಲಿಯಲ್ಲಿರುವ ಆಭರಣ ಅಂಗಡಿಗೆ ಕರೆದೊಯ್ಯಿತು.
ಮೃತ ಮಹಿಳೆಯ ದೇಹದ ಮೇಲೆ ಮೂಗುತಿಯನ್ನು ನೋಡಿದ ಪೊಲೀಸರು ಸುತ್ತಮುತ್ತಲಿನ ಆಭರಣದ ಅಂಗಡಿಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿ ಅನಿಲ್ ಕುಮಾರ್ ಅವರ ಹೆಸರಿನಲ್ಲಿ ಬಿಲ್ ಇದ್ದ ಕಾರಣ ಅವರನ್ನು ಪತ್ತೆಹಚ್ಚಲು ಕಾರಣವಾಯಿತು. ಅನಿಲ್ ಕುಮಾರ್ ದೆಹಲಿಯಲ್ಲಿ ಆಸ್ತಿ ವ್ಯಾಪಾರಿಯಾಗಿದ್ದು, ಅವರು ಗುರುಗ್ರಾಮ್‌ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.
ದಾಖಲೆಗಳಲ್ಲಿ ಉಲ್ಲೇಖಿಸಲಾದ ವಿಳಾಸವನ್ನು ಪರಿಶೀಲಿಸಿ ಅನಿಲ್ ಕುಮಾರ್ ಅವರ ಮನೆಗೆ ಹೋದಾಗ ಸೀಮಾ ಸಿಂಗ್ ಅವರ ಪತ್ನಿ ಎಂದು ಕಂಡುಬಂದಿತು. ಪೊಲೀಸರು ಸೀಮಾ ಸಿಂಗ್ ಜೊತೆ ಮಾತನಾಡಬೇಕೆಂದು ಹೇಳಿದಾಗ ಅನಿಲ್ ಕುಮಾರ್ ಆಕೆ ಮೊಬೈಲನ್ನು ಮನೆಯಲ್ಲೇ ಬಿಟ್ಟು ಬೃಂದಾವನಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದರು. ಇದರಿಂದ ಪೊಲೀಸರು ಅನುಮಾನಗೊಂಡು ಅನಿಲ್ ಕುಮಾರ್ ಅವರ ದೆಹಲಿ ಮೂಲದ ಕಚೇರಿಗೆ ಹೋದರು.
ಅಲ್ಲಿ ಅವರಿಗೆ ಸೀಮಾಳ ತಾಯಿಯ ಫೋನ್ ನಂಬರ್ ಸಿಕ್ಕಿತು. ಅವರನ್ನು ವಿಚಾರಿಸಿದಾಗ ತಾವು ತಮ್ಮ ಮಗಳೊಂದಿಗೆ ಒಂದು ತಿಂಗಳಿನಿಂದ ಮಾತನಾಡಿಲ್ಲ. ಆಕೆ ಹೇಗಿದ್ದಾಳೋ ಗೊತ್ತಿಲ್ಲ ಎಂದರು. ಅಳಿಯ ಅನಿಲ್ ಕುಮಾರ್ ಆಕೆ ಜೈಪುರಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇದರಿಂದ ಪೊಲೀಸರು ಅನುಮಾನ ಬಲವಾಗಿ, ಅನಿಲ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ತಾನೇ ಹೆಂಡತಿಯ ಕತ್ತು ಹಿಸುಕಿ ಕೊಂದಿದ್ದಾಗಿ ಅನಿಲ್ ಒಪ್ಪಿಕೊಂಡಿದ್ದಾನೆ.