ಬೆಂಗಳೂರು: ನವೆಂಬರ್ ತಿಂಗಳು ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂಬ ಚರ್ಚೆಗಳು ಮತ್ತಷ್ಟು ಹೆಚ್ಚಾಗುತ್ತಿದೆ. ಅಲ್ಲದೇ ಯತೀಂದ್ರ ಸಿದ್ದರಾಮಯ್ಯ ನೀಡಿದ ಸಿದ್ದರಾಮಯ್ಯ ಉತ್ತಾರಾಧಿಕಾರಿ ಹೇಳಿಕೆ ಈ ಚರ್ಚೆಗಳು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿದ್ದು, ಅವರ ಬಳಿಕ ಸತೀಶ್ ಜಾರಕಿಹೊಳಿ ಪಕ್ಷವನ್ನು ಮುನ್ನಡೆಸಲು ಸಮರ್ಥರಾದ ವ್ಯಕ್ತಿ ಎಂದಿದ್ದಾರೆ.
ಹೀಗೆ ಸಿದ್ದರಾಮಯ್ಯ ಪುತ್ರ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸುತ್ತಿದ್ದಂತೆಯೇ ಅತ್ತ ಡಿಕೆ ಶಿವಕುಮಾರ್ ಬಳಗದಲ್ಲಿ ಆತಂಕದ ಜತೆ ವಿರೋಧವೂ ಶುರುವಾಗಿದೆ. ಅಲ್ಲದೇ ಯತೀಂದ್ರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಗಳೂ ಸಹ ವ್ಯಕ್ತವಾಗಿವೆ.
ಹೀಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲಿ ಎಕ್ಸ್ ಖಾತೆಯಲ್ಲಿ ಜ್ಯೋತಿಷ್ಯದ ಟ್ವೀಟ್‌ಗಳನ್ನು ಮಾಡುವ ಜ್ಯೋತಿಷಿ ಪ್ರಶಾಂತ್ ಕಿಣಿ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬರೆದುಕೊಂಡಿದ್ದಾರೆ.
ಕೆಲವೊಮ್ಮೆ ಅಧಿಕಾರ ಹಂಚಿಕೆಯ ಕಿತ್ತಾಟ ಇನ್ಯಾರಿಗೋ ಲಾಭ ತರುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದಿರುವ ಪ್ರಶಾಂತ್ ಕಿಣಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ಮುಖ್ಯಮಂತ್ರಿ ಸ್ಥಾನದ ಕುರಿತಾದ ಕಿತ್ತಾಟ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಲಾಭದಾಯವಾಗಬಹುದು. ಯಾರೂ ವಿರೋಧಿಸಲಾಗದಂತಹ ಮಹಿಳಾ ಕಾರ್ಡನ್ನು ಕಾಂಗ್ರೆಸ್ ಬಳಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಇನ್ನು 2024ರ ಏಪ್ರಿಲ್ 11ರಂದು ಪವರ್‌ಶೇರಿಂಗ್ ಚರ್ಚೆಯ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ 2025ರ ಏಪ್ರಿಲ್ ವೇಳೆಗೆ ಸಿಎಂ ಆಗಲಿದ್ದಾರೆ ಎಂದು ಬರೆದುಕೊಂಡಿದ್ದ ಟ್ವೀಟನ್ನು ಶೇರ್ ಮಾಡಿಕೊಂಡಿರುವ ಪ್ರಶಾಂತ್ ಕಿಣಿ ತಾನು ಇದನ್ನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಇವರ ಭವಿಷ್ಯದ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯಮಂತ್ರಿಯಾಗಿ ಈ ಸಮಯಕ್ಕೆ 6 ತಿಂಗಳಾಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಅಲ್ಲದೇ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿರುಪರಾಧಿಯಾಗಿ ಹೊರಬರಲಿದ್ದಾರೆ ಎಂದು ಸಹ ಭವಿಷ್ಯ ನುಡಿದಿದ್ದ ಇವರ ಆ ಟ್ವೀಟ್ ಸಹ ಹುಸಿಯಾಗಿದೆ. ಇವರ ಪ್ರಕಾರ ಇಷ್ಟೊತ್ತಿಗೆ ಯಶಸ್ಸು ಸಾಧಿಸಬೇಕಿದ್ದ ದರ್ಶನ್ ಹಾಸಿಗೆ, ದಿಂಬಿಗಾಗಿ ಪರಪ್ಪನ ಅಗ್ರಹಾರದಲ್ಲಿ ಪರದಾಡುತ್ತಿದ್ದಾರೆ.




